ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಅತ್ಯಂತ ಹಿರಿಯ ನಾಗರಿಕ ವ್ಯಕ್ತಿಯ ಅಂಗಾಂಗ ದಾನ

Prakhara News
2 Min Read

ಮಂಗಳೂರು: ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ 65 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿರಿಯ ನಾಗರಿಕರೊಬ್ಬರು ಮಾಡಿದ ಅಂಗಾಂಗ ದಾನ ಎಂಬುದಾಗಿ ಗುರುತಿಸಲ್ಪಟ್ಟಿದೆ.

ಮಂಗಳೂರಿನ ಬಜಪೆ ಮೂಲದ ದಯಾಕರ ಕೋಟ್ಯಾನ್ ಅವರು ಕೋಲಾರದಲ್ಲಿ ವಾಸಿಸುತ್ತಿದ್ದು, ಫೆಬ್ರವರಿ 22 ರಂದು ಕೋಲಾರದ ಮಾಲೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಅವರನ್ನು ನರಶಸ್ತ್ರಚಿಕಿತ್ಸೆ ಮತ್ತು ಸಂಕೀರ್ಣ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೀನಿಯರ್ ಕನ್ಸಲ್ವೆಂಟ್ ನ್ಯೂರೋ ಸರ್ಜನ್ ಡಾ. ಸಿ.ಕೆ. ಬಲ್ಲಾಳ್ ಅವರ ಮೇಲ್ವಿಚಾರಣೆಯಲ್ಲಿ ಪರಿಣತ ವೈದ್ಯರ ತಂಡ ದಯಾಕರ ಕೋಟ್ಯಾನ್ ಅವರಿಗೆ ಚಿಕಿತ್ಸೆಯನ್ನು ನೀಡಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರಿಗೆ ಅಂಗಾಂಗ ದಾನದ ಬಗ್ಗೆ ತಿಳುವಳಿಕೆ ನೀಡಲಾಯಿತು.

ಕೋಟ್ಯಾನ್ ಅವರ ಪತ್ನಿ ಸುರೇಖಾ ಮತ್ತು ಸಹೋದರ ಕೇಶವ ಪೂಜಾರಿ ಹಾಗೂ ಕುಟುಂಬ ಇತರ ಸದಸ್ಯರು ಅಂಗಾಂಗ ದಾನಕ್ಕೆ ಸಂಪೂರ್ಣ ಒಪ್ಪಿಗೆ ನೀಡಿದರು. ಬಳಿಕ ಜೀವ ಸಾರ್ಥಕತೆ ಸಂಸ್ಥೆಗೆ ಮಾಹಿತಿ ನೀಡಿ ಅದರ ಮಾರ್ಗದರ್ಶನದಂತೆ ಅಂಗಾಂಗ ದಾನ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಯಿತು. ಎಡ ಕಿಡ್ನಿಯನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ, ಬಲ ಕಿಡ್ನಿಯನ್ನು ಶಿವಮೊಗ್ಗದ ಎನ್,ಯು. ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಚರ್ಮ ಮತ್ತು ಕಾರ್ನಿಯಾಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆ ತನ್ನಲ್ಲೇ ಉಳಿಸಿಕೊಂಡಿದೆ. ಅಂಗಾಂಗ ದಾನದ ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಅಂಗಾಂಗ ದಾನ ಮಾಡಿದ ದಯಾಕರ್ ಕೋಟ್ಯಾನ್ ಕುಟುಂಬದವರನ್ನು ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾ. ಫೌಸ್ತಿನ್‌ ಲೋಬೊ ಅವರು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಮಾರಂಭದಲ್ಲಿ ಫಾದರ್ ಮುಲ್ಲರ್ ಮೆಡಿಕಲ್‌ ಕಾಲೇಜಿನ ಆಡಳಿತಾಧಿಕಾರಿ ವಂದನೀಯ ಫಾ. ಜಾರ್ಜ್‌ ಜೀವನ್ ಸಿಕ್ವೆರಾ, ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಇದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ನಡೆಸಿದ 7 ನೇ ಅಂಗಾಂಗ ದಾನ ಪ್ರಕ್ರಿಯೆಯಾಗಿದೆ.

Share This Article
Leave a Comment