ವಿನಯಕುಮಾರ್ ಸೊರಕೆಯಿಂದ ಚಿಲ್ಲರೆ ರಾಜಕಾರಣ- ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Prakhara News
2 Min Read

ಉಡುಪಿ: ಕಾಪು ಕ್ಷೇತ್ರದ ಅಭಿವೃದ್ಧಿ, ಜನಪರ ಕಾರ್ಯಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅಡ್ಡಿಪಡಿಸಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು‌ ನಾವು ಸಹಿಸುವುದಿಲ್ಲ. ಸಂಘರ್ಷದ ರಾಜಕೀಯ ಮುಂದುವರಿಸಿದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುಡುಗಿದ್ದಾರೆ.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪು ಕ್ಷೇತ್ರದಲ್ಲಿ ನಡೆಯುವ ಪ್ರತಿ ಅಭಿವೃದ್ಧಿ ಕೆಲಸಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅಧಿಕಾರಿಗಳನ್ನು ಬಳಸಿಕೊಂಡು ಸರಕಾರದ ಮೂಲಕ ಒತ್ತಡ ಹಾಕಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೂರಿದರು.

6 ತಿಂಗಳ ಹಿಂದೆಯೇ ಎಸಿ, ಡಿಸಿ ಸಹಿತ ಸರಕಾರಿ ಅಧಿಕಾರಿಗಳು‌ ಪರಿಶೀಲನೆ ನಡೆಸಿ ಗಡಿ ಗುರುತು ಮಾಡಿ 6.30 ಎಕರೆ ಭೂಮಿಯನ್ನು ಯುವಜನ ಸಬಲೀಕರಣ ಇಲಾಖೆಗೆ ಇದೇ ಸರಕಾರ ಮಂಜೂರು ಮಾಡಿದೆ. ಪಕ್ಷಾತೀತ , ಜಾತ್ಯಾತೀತವಾಗಿ ಕಂಬಳ ಸಮಿತಿ ರಚಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಮಂತ್ರಣ ಪತ್ರಿಕೆಯ ನಕಲು ಕಳುಹಿಸಿ ಅವರಿಂದಲೇ ಒಪ್ಪಿಗೆಯನ್ನು ಪಡೆಯಲಾಗಿದೆ.

ಕಾಂಗ್ರೆಸ್ ನ ನಾಯಕರ ಪೋಟೋವನ್ನು ಮುದ್ರಿಸಲಾಗಿದೆ. ಕೊನೆಯ ಕ್ಷಣದಲ್ಲಿ ಸೊರಕೆ ಉಸ್ತುವಾರಿ ಸಚಿವರಿಗೆ ಒತ್ತಡ ಹಾಕಿ ಕಂಬಳವನ್ನು ನಿಲ್ಲಿಸುವ ಕುತಂತ್ರ ರಾಜಕೀಯವನ್ನು ಮುಂದುವರಿಸಿದ್ದಾರೆ. ಕರಾವಳಿಯ ಬಗ್ಗೆ ಅಸಡ್ಡೆ, ಅನುದಾನದ ಅಭಾವ ಮಂತ್ರಿಗಳ ಮಲತಾಯಿಧೋರಣೆ ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಂಬಳ‌ ನಡೆಯಬಾರದು, ಅದರ ಕೀರ್ತಿ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಸಿಗಬಾರದು ಎನ್ನುವ ಕಾರಣಕ್ಕಾಗಿ ಅಧಿಕಾರಿಗಳ ಮೂಲಕ ಒತ್ತಡ ಹಾಕಿ ನಿರಂತರ ಅಡ್ಡಿಪಡಿಸುವ ಕೆಲಸ ಕರಾವಳಿಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳಿಂದ ನಡೆಯುತ್ತಿದೆ. ಇಲ್ಲಿ ಕಂಬಳ ನೆಪ ಮಾತ್ರ.

ಜನಪರ ಚಟುವಟಿಕೆ ನಡೆಯಬಾರದು. ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಬೇಕು ಎಂಬುವುದು ಕಾಂಗ್ರೆಸ್ ನ ಹಿಡನ್ ಅಜೆಂಡಾ. ಅಧಿಕಾರಿಗಳ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳ ಕೈಗೊಂಬೆಗಳಂತೆ ಕೆಲಸ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ಕಂಬಳಕ್ಕೆ ಅನುದಾನ ಕೊಡುವುದು, ಬಿಡುವುದು ಸರಕಾರಕ್ಕೆ ಬಿಟ್ಟಿದ್ದು. ಸರಕಾರ ಅನುದಾನ ಕೊಡಲಿ, ಬಿಡಲಿ ಕಂಬಳ ಸಮಿತಿ ನಿರ್ವಹಣೆ ಮಾಡುತ್ತದೆ. ಉಡುಪಿ ಕಂಬಳಕ್ಕೆ ಇನ್ನೊಮ್ಮೆ ಭೂಮಿಪೂಜೆ ನಡೆಸಿದರೆ ನಾವು ಬಿಡುವುದಿಲ್ಲ. ಉಗ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Share This Article
Leave a Comment