ಕಾಸರಗೋಡು: ಚಿನ್ನಾಭರಣ ಕಳವು ಆರೋಪ, ಅಪಮಾನ ತಾಳಲಾರದೆ ಯುವತಿ ಆತ್ಮಹತ್ಯೆ

Prakhara News
1 Min Read

ಕಾಸರಗೋಡು: ಚಿನ್ನಾಭರಣ ಕಳವು ಮಾಡಿದ ಆರೋಪದ ಮೇಲೆ ನೆರೆಹೊರೆಯವರು ಹಾಗೂ ಪೊಲೀಸರಿಂದ ಮಾನಸಿಕ ಕಿರುಕುಳ ಅನುಭವಿಸಿದ ಯುವತಿಯೊಬ್ಬಳು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಆದೂರು ಸಮೀಪದ ನೆಲ್ತಡ್ಕದಲ್ಲಿ ನಡೆದಿದೆ.ಮೃತ ಯುವತಿಯನ್ನು ನೆಲ್ತಡ್ಕ ನಿವಾಸಿ ಜಸೀಲಾ (24 ವರ್ಷ) ಎಂದು ಗುರುತಿಸಲಾಗಿದೆ. ಇವರು ಇಬ್ಬರು ಮಕ್ಕಳ ತಾಯಿಯಾಗಿದ್ದರು.

ಘಟನೆಯ ವಿವರ:

ಪತಿ ಮನೆಯ ಸಮೀಪದ ಯುವಕ ಹಾಗೂ ಆತನ ಕುಟುಂಬಸ್ಥರು ಜಸೀಲಾ ವಿರುದ್ಧ ಚಿನ್ನಾಭರಣ ಕಳವು ಮಾಡಿರುವ ಆರೋಪ ಹೊರಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಜಸೀಲಾರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಆಕೆಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ವಿಚಾರಣೆ ಹೆಸರಿನಲ್ಲಿ ಪೊಲೀಸರು ಮಾನಸಿಕವಾಗಿ ತೀವ್ರ ಕಿರುಕುಳ ನೀಡಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ:

ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಜಸೀಲಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಅಪಪ್ರಚಾರ ನಡೆಸಲಾಗಿತ್ತು ಎನ್ನಲಾಗಿದೆ. ಇಲ್ಲದ ಕಳವು ಆರೋಪ ಹೊರಿಸಿ ತನ್ನನ್ನು ಕಳ್ಳಿಯಂತೆ ಬಿಂಬಿಸುತ್ತಿರುವುದರಿಂದ ಜಸೀಲಾ ತೀವ್ರವಾಗಿ ನೊಂದಿದ್ದರು.

ವಿಡಿಯೋ ಮಾಡಿ ವಿಷ ಸೇವನೆ:

ಮಾನಸಿಕವಾಗಿ ಕುಗ್ಗಿದ್ದ ಜಸೀಲಾ ಕಳೆದ ಭಾನುವಾರ “ನಾನು ಅಮಾಯಕಿ, ಯಾವುದೇ ಕಳವು ಮಾಡಿಲ್ಲ” ಎಂದು ವಿಡಿಯೋವೊಂದನ್ನು ಮಾಡಿಟ್ಟು ವಿಷ ಸೇವಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಅವರು ಕೊನೆಯುಸಿರೆಳೆದಿದ್ದಾರೆ.

​ಪ್ರಸ್ತುತ ಆದೂರು ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article
Leave a Comment