ಮಂಗಳೂರು: ಕೇಂದ್ರ ಸರಕಾರವು ಮನ್ರೇಗಾ ಸ್ವರೂಪ ಬದಲಾವಣೆ ಹಾಗೂ ಮಹಾತ್ಮ ಗಾಂಧೀಜಿ ಹೆಸರು ಬದಲಾವಣೆ ಮಾಡಿರುವುದನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯದಿಂದ ಮುಲ್ಕಿ ವರೆಗೆ 4 ದಿನಗಳ 100 ಕಿಮೀ ಪಾದಯಾತ್ರೆಯನ್ನು ಫೆ.9ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.


ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಾದಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಮತ್ತಿತರ ಪ್ರಮುಖರು ವಿವಿಧ ದಿನಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುಳ್ಯದಲ್ಲಿ ಚಾಲನೆ: ಫೆ.9ರಂದು ಬೆಳಗ್ಗೆ 8:30ಕ್ಕೆ ಸುಳ್ಯದ ಗಾಂಧಿನಗರದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾ ಗುವುದು. ಅಂದು ಸುಳ್ಯದ ಗಾಂಧಿನಗರದಿಂದ ಪುತ್ತೂರಿನ ಕುಂಬ್ರ ಜಂಕ್ಷನ್ವರೆಗೆ ಪಾದಯಾತ್ರೆ ನಡೆಯಲಿದೆ ಎಂದು ವಿವರಿಸಿದರು.
2ನೇ ದಿನವಾದ ಫೆ.10ರಂದು ಕುಂಬ್ರ- ಮಾಣಿ, ಫೆ.11ರಂದು ಕಲ್ಲಡ್ಕ- ಫರಂಗಿಪೇಟೆ, ಫೆ.12ರಂದು ಮಂಗಳೂರಿನ ಲಾಲ್ಬಾಗ್ನಿಂದ ಮೂಲ್ಕಿವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಹರೀಶ್ ಕುಮಾರ್ ಮಾಹಿತಿ ನೀಡಿದರು.
ಪ್ರತಿದಿನ 25- 28 ಕಿಮೀ ಪಾದಯಾತ್ರೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಉಪಹಾರ ಮುಗಿಸಿ, 8:30 ಗಂಟೆಗೆ ಪಾದಯಾತ್ರೆ ಆರಂಭಿಸಲಾಗುವುದು. ಮಧ್ಯಾಹ್ನ 2 ಗಂಟೆ ಭೋಜನ ವಿರಾಮದ ಬಳಿಕ ಸಂಜೆ 6 ಗಂಟೆವರೆಗೆ ಮುಂದುವರಿಯಲಿದೆ. ಪ್ರತಿದಿನ ಪಾದಯಾತ್ರೆಯ ಕೊನೆಯಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು. ಫೆ.9ರಂದು ಕುಂಬ್ರ, ಫೆ.10ರಂದು ಮಾಣಿ, ಫೆ.11ರಂದು ಫರಂಗಿಪೇಟೆ, ಫೆ.12ರಂದು ಮೂಲ್ಕಿಯಲ್ಲಿ ಸಮಾವೇಶ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯ ಮೂಲಕ ಜನರಿಗೆ ಕೇಂದ್ರ ಸರಕಾರ ಮಾಡಿರುವ ಮೋಸವನ್ನು ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ತರಾತುರಿಯಲ್ಲಿ ಕಾಯ್ದೆ: ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ, ಕೇಂದ್ರ ಸರಕಾರವು ಸರಿಯಾದ ಚರ್ಚೆಯನ್ನೇ ನಡೆಸದೆ ತರಾತುರಿಯಲ್ಲಿ ವಿಬಿ ಜಿರಾಮ್ಜಿ ಕಾಯ್ದೆ ಜಾರಿಗೆ ತಂದಿದೆ. ಜನಪ್ರಿಯ ಕಾರ್ಯಕ್ರಮದಿಂದ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆಸುವುದು ಮತ್ತು ಬಡವರನ್ನು ಮತ್ತಷ್ಟು ಬಡವರನ್ನಾಗಿ ಸುವುದೇ ಕೇಂದ್ರ ಸರಕಾರದ ಉದ್ದೇಶ. ಈ ಕಾಯ್ದೆಯನ್ನು ಹಿಂಪಡೆಯುವವರೆಗೂ ಹೋರಾಟ ನಡೆಸಲಾಗುವುದು ಎಂದರು.
ಮಾಜಿ ಶಾಸಕ ಜೆಆರ್ ಲೋಬೊ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ, ಶಶಿಧರ ಹೆಗ್ಡೆ, ಭಾಸ್ಕರ ಕೆ., ಶುಭೋದಯ ಆಳ್ವ, ನವಾಝ್, ಸುಹಾನ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

