ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಮಣಿಪಾಲ ಪೊಲೀಸರು ಬಂಟ್ವಾಳ ಮತ್ತು ಕಡಬದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.


ಬಂಟ್ವಾಳ ತಾಲೂಕಿನ ಪುತ್ತೂರು ರಸ್ತೆ ನಿವಾಸಿ ನಿತೇಶ್ ಕೆ. (20) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ನಿವಾಸಿ ಹಿತೇಶ್ ಎ. (19) ಬಂಧಿತ ಆರೋಪಿಗಳು. ಆರೋಪಿ ನಿತೇಶ್ನನ್ನು ಜನವರಿ 30ರಂದು ಪುತ್ತೂರು ತಾಲೂಕಿನ ಕಲಾಬ ಜಂಕ್ಷನ್ ಬಳಿ ಬಂಧಿಸಲಾಗಿದೆ. ಹಿತೇಶ್ನನ್ನು ಫೆಬ್ರವರಿ 1ರಂದು ಮಂಗಳೂರಿನ ಲಾಲ್ಬಾಗ್ನಲ್ಲಿ ಬಂಧಿಸಲಾಗಿದೆ.
2025ರ ಮೇ 16ರಂದು ಕಾರ್ಕಳದ ಹಿಂದೂ ವಿವಾಹಿತ ಮಹಿಳೆ ಮತ್ತು ಮುಸ್ಲಿಂ ಯುವಕನಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿತ್ತು. ಧರ್ಮಗಳ ನಡುವೆ ದ್ವೇಷ ಬಿತ್ತುವ ಮತ್ತು ಉದ್ವಿಗ್ನತೆ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಮಣಿಪಾಲ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ತನಿಖೆಯ ವೇಳೆ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಸಂಬಂಧಿಸಿದ ಡಿಜಿಟಲ್ ಪುರಾವೆ ಮತ್ತು ಮೆಟಾಡೇಟಾವನ್ನು ವಿಶ್ಲೇಷಿಸಿ ಆರೋಪಿಗಳನ್ನು ಗುರುತಿಸಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೈಬರ್ ಅಪರಾಧ ಮತ್ತು ಕೋಮು ಪ್ರಚೋದನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

