ಕೇರಳ: ಕೋಝಿಕ್ಕೋಡ್ ಜಿಲ್ಲೆಯ ತೊಟ್ಟಿಲ್ಪಾಲಂನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕಿ ಕೆ. ಅನುಮೋಲ್ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, 10 ದಿನಗಳ ಬಳಿಕ ಅವರನ್ನು ಪಾಲಕ್ಕಾಡ್ನಲ್ಲಿ ಪತ್ತೆಹಚ್ಚಲಾಗಿದೆ. ಅವರೊಂದಿಗೆ ವಡಕರ ತೊಡನ್ನೂರು ನಿವಾಸಿ ಅಬ್ದುಲ್ ಸಮದ್ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತಿ ಸುಭಾಷ್ ಅವರು ಸುಮಾರು ಹತ್ತು ವರ್ಷಗಳ ಹಿಂದೆ ತಮ್ಮ ಯಕೃತ್ತಿನ ಭಾಗವನ್ನು ದಾನ ಮಾಡಿ ಅನುಮೋಲ್ ಅವರ ಜೀವ ಉಳಿಸಿದ್ದರು, ಆದರೆ ಅಂತಹ ಪತಿಯನ್ನು ಬಿಟ್ಟು ಇದೀಗ ಬೆರೆಯವರೊಂದಿಗೆ ಹೋಗಿರುವುದು ಈ ಪ್ರಕರಣಕ್ಕೆ ಮತ್ತಷ್ಟು ಭಾವನಾತ್ಮಕ ಆಯಾಮ ನೀಡಿದೆ.


ಅನುಮೋಲ್ ಅವರು ತೊಟ್ಟಿಲ್ಪಾಲಂನ ಮೊಯಿಲೋಥರ ಸರ್ಕಾರಿ ಎಲ್ಪಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 5ರಂದು ಶಾಲೆಗೆ ತೆರಳಿದ್ದ ಅವರು, ಸಂಜೆ ಮನೆಗೆ ಮರಳದೆ ನಾಪತ್ತೆಯಾಗಿದ್ದರು. ಶಾಲೆಯಿಂದ ಹೊರಬಂದ ಬಳಿಕ ತಮ್ಮ ಮಗಳನ್ನು ಶಾಲಾ ವಾಹನಕ್ಕೆ ಹತ್ತಿಸಿ ಕಳುಹಿಸಿದ ನಂತರ ಅವರು ಕಾಣೆಯಾಗಿದ್ದರು ಎನ್ನಲಾಗಿದೆ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.
ಕುಟುಂಬದವರು ಅದೇ ದಿನ ಪೊಲೀಸರಿಗೆ ದೂರು ನೀಡಿದ್ದರು. ಹತ್ತು ದಿನಗಳಾದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಕುಟುಂಬವು ಕೇರಳ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿತ್ತು. ಈ ನಡುವೆ ಅನುಮೋಲ್ ಅವರ ನಾಪತ್ತೆಯಲ್ಲಿ ಅಬ್ದುಲ್ ಸಮದ್ ಪಾತ್ರವಿರುವ ಶಂಕೆಯೂ ವ್ಯಕ್ತವಾಗಿತ್ತು. ತೊಟ್ಟಿಲ್ಪಾಲಂ ಪೊಲೀಸ್ ಠಾಣೆಯ ಎಸ್ಐ ಸಿ.ಪಿ. ಸುಹೈಲ್ ನೇತೃತ್ವದ ತನಿಖಾ ತಂಡವು ಅನುಮೋಲ್ ಮತ್ತು ಅಬ್ದುಲ್ ಸಮದ್ ಅವರನ್ನು ಪಾಲಕ್ಕಾಡ್ನ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯ ಪುತುಶೇರಿ ಪ್ರದೇಶದಲ್ಲಿ ಪತ್ತೆಹಚ್ಚಿದೆ. ಇಬ್ಬರೂ ಅಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆ ಹಾಗೂ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ, ಕೌನ್ಸೆಲಿಂಗ್ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ತನಿಖೆಯ ವೇಳೆ ಇಬ್ಬರೂ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗುವುದನ್ನು ತಪ್ಪಿಸಲು ಪ್ರಮುಖ ರಸ್ತೆಗಳನ್ನು ಬಿಟ್ಟು ಪ್ರಯಾಣಿಸಿದ್ದರೆಂಬ ಮಾಹಿತಿ ಹೊರಬಂದಿದೆ. ತಮ್ಮ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ ಅವರು, ವಿವಿಧ ಸ್ಥಳಗಳಲ್ಲಿ ಇತರರ ಫೋನ್ಗಳ ಹಾಟ್ಸ್ಪಾಟ್ ಅಥವಾ ವೈ-ಫೈ ಸಂಪರ್ಕ ಪಡೆದು ವಾಟ್ಸ್ಆ್ಯಪ್ ಬಳಸುತ್ತಿದ್ದರು ಎಂದು ಮನೋರಮಾ ನ್ಯೂಸ್ ವರದಿ ಮಾಡಿದೆ.
ತೊಟ್ಟಿಲ್ಪಾಲಂನಿಂದ ಮಾಹಿ ಕಡೆಗೆ ತೆರಳಿದ್ದ ಅವರು, ಬಳಿಕ ಕಾಸರಗೋಡು ಜಿಲ್ಲೆಯ ಚೆರುವತ್ತೂರಿನಲ್ಲಿಯೂ ವಾಟ್ಸ್ಆ್ಯಪ್ ಬಳಸಿದ್ದರೆಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಅಬ್ದುಲ್ ಸಮದ್ ಏಳು ಸಿಮ್ ಕಾರ್ಡ್ಗಳನ್ನು ಬಳಸುತ್ತಿದ್ದ ಮಾಹಿತಿ ತನಿಖೆಗೆ ಸವಾಲಾಗಿತ್ತು. ಅವುಗಳಲ್ಲಿ ಹಲವು ಸ್ವಿಚ್ ಆಫ್ ಆಗಿದ್ದವು. ನಂತರ ಸಮದ್ ತನ್ನ ಸ್ನೇಹಿತ ಅರ್ಷದ್ಗೆ ಕರೆ ಮಾಡಿದ್ದ ಸುಳಿವಿನ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸಿದರು. ಬಳಿಕ ಹೊಸ ಸಿಮ್ ಕಾರ್ಡ್ ಬಳಕೆಯ ಸುಳಿವು ದೊರೆತಿದ್ದು, ಅದರ ಆಧಾರದಲ್ಲಿ ಪಾಲಕ್ಕಾಡ್ನ ಪುತುಶೇರಿಯಲ್ಲಿದ್ದ ಬಾಡಿಗೆ ಮನೆಯವರೆಗೆ ತನಿಖಾ ತಂಡ ತಲುಪಿದೆ ಎಂದು ವರದಿಯಾಗಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ಗರ್ಭಿಣಿಯಾಗಿದ್ದ ಅನುಮೋಲ್ ಅವರಿಗೆ ಗಂಭೀರ ಯಕೃತ್ತಿನ ಕಾಯಿಲೆ ಕಾಣಿಸಿಕೊಂಡಿತ್ತು. ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯೇ ಚಿಕಿತ್ಸೆಗಾಗಿ ಅಗತ್ಯವಾಗಿತ್ತು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸುವುದು ಕಷ್ಟವಾಗಿತ್ತು. ಆಗ ಸ್ಥಳೀಯರು ಮತ್ತು ಮಾಧ್ಯಮಗಳ ನೆರವಿನಿಂದ ಹಣ ಸಂಗ್ರಹಿಸಲಾಗಿತ್ತು. ಅನುಮೋಲ್ ಅವರ ಪತಿ ಸುಭಾಷ್ ತಮ್ಮ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದ್ದರು. ಈ ಶಸ್ತ್ರಚಿಕಿತ್ಸೆಯ ಬಳಿಕ ಅನುಮೋಲ್ ಚೇತರಿಸಿಕೊಂಡು, ನಂತರ ಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಸರ್ಕಾರಿ ಸೇವೆಗೆ ಸೇರಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮನೋರಮಾ ನ್ಯೂಸ್ ವರದಿ ಪ್ರಕಾರ, ಅಬ್ದುಲ್ ಸಮದ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಿವೆ ಎಂದು ಹೇಳಲಾಗಿದೆ. ವಿವಾಹಿತ ಮಹಿಳೆಯರನ್ನು ಪ್ರೀತಿಯ ನೆಪದಲ್ಲಿ ಕರೆದುಕೊಂಡು ಹೋಗಿ, ಹಣ ಅಥವಾ ಆಸ್ತಿ ಪಡೆದು ನಂತರ ಕೈಬಿಡುತ್ತಿದ್ದನೆಂಬ ಆರೋಪವನ್ನೂ ಸ್ಥಳೀಯರು ಮಾಡಿದ್ದಾರೆ. ಈ ಆರೋಪಗಳ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ.
ಕುಟುಂಬವು ಇಬ್ಬರು ಮಕ್ಕಳ ಭವಿಷ್ಯ ಮತ್ತು ಅನುಮೋಲ್ ಅವರ ಪೋಷಕರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಸ್ವೀಕರಿಸಲು ಸಿದ್ಧವಿದೆ ಎಂದು ಪೊಲೀಸರಿಗೆ ತಿಳಿಸಿದೆ ಎನ್ನಲಾಗಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳು ಪೊಲೀಸ್ ವಿಚಾರಣೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳ ಬಳಿಕ ಸ್ಪಷ್ಟವಾಗಬೇಕಿದೆ.

