ಮಂಗಳೂರು : ಮುಂಬರುವ ಬೇಸಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲೆಯ ಕುಡಿಯುವ ನೀರಿನ ಸಮಗ್ರ ನಿರ್ವಹಣೆ ಕುರಿತ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ನಗರ ಸ್ಥಳೀಯ ವಾರ್ಡುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ಅಡಚಣೆಯಾಗದಂತೆ ಹಾಗೂ ನೀರಿನ ಕೊರತೆಯಾಗಬಾರದು. ಈ ಹಿನ್ನೆಲೆಯಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕೂಡಲೇ ಯೋಜನೆ ರೂಪಿಸಿ ಸನ್ನದ್ಧರಾಗಬೇಕು. ಲಭ್ಯವಿರುವ ನೀರಿನ ಮೂಲಗಳನ್ನು ಗುರುತಿಸಿ ಅಗತ್ಯ ಸಂದರ್ಭದಲ್ಲಿ ನೀರು ಪೂರೈಕೆ ಆಗುವಂತೆ ಗಮನಹರಿಸಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲಾ 14 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್ಗಳಲ್ಲಿ ನೀರಿನ ಮೂಲ ವಿತರಣಾ ಜಾಲವನ್ನು ಆಗಾಗ್ಗೆ ಅಧಿಕಾರಿಗಳು ಖುದ್ದು ಮೇಲ್ವಿಚಾರಣೆ ನಡೆಸಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ನೀರು ಒದಗಿಸಲು ಟ್ಯಾಂಕರ್ಗಳನ್ನು ಬಳಸಬೇಕು. ಸ್ಥಳೀಯ ಸಂಸ್ಥೆಗಳು ಬೇಸಿಗೆಯಲ್ಲಿ ನೀರು ಒದಗಿಸಲು ತಮ್ಮಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಬೇಕು ಎಂದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ತುಂಬೆಯಿಂದ ನೇತ್ರಾವತಿ ನೀರು ಪೂರೈಕೆ ಜಾಲದಲ್ಲಿ ಕೆಲವೆಡೆ ಅನಧಿಕೃತ ಸಂಪರ್ಕ ಪಡೆದಿರುವ ಬಗ್ಗೆ ಕೂಡಲೇ ಕ್ರಮ ವಹಿಸಿ, ಸಂಬಂಧಿಸಿದ ಗ್ರಾಮ ಪಂಚಾಯತ್ಗಳೊಂದಿಗೆ ಒಪ್ಪಂದ ಮಾಡಿಕೊಂಡು ಶುಲ್ಕ ಪಡೆಯುವಂತೆ ತಿಳಿಸಿದರು.
ತುಂಬೆ ನೇತ್ರಾವತಿ ಡ್ಯಾಮ್ ನಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಹಾಗೂ ಕೈಗಾರಿಕೆಗಳ ಒಟ್ಟು 7 ಜಾಕ್ವೆಲ್ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ನೇತ್ರಾವತಿ ಡ್ಯಾಮ್ನಲ್ಲಿ ಲಭ್ಯವಿರುವ ನೀರು ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆಗೆ ಸದ್ಯದ ಲೆಕ್ಕಾಚಾರದಲ್ಲಿ ಸಾಕಾಗಲಿದೆ ಎಂದು ನಗರಪಾಲಿಕೆ ಅಧಿಕಾರಿಗಳು ತಿಳಿಸಿದರು.
ಕುಡಿಯುವ ನೀರಿನ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದಂತೆ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ಗಳು ಗಮನಹರಿಸಬೇಕು ಎಂದ ಡಿಸಿ, ಸಭೆಗೆ ಸಮರ್ಪಕ ಮಾಹಿತಿ ಒದಗಿಸದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ರಾಜು ಕೆ., ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರು ಉಪಸ್ಥಿತರಿದ್ದರು.

