ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಭೀಕರ ಹತ್ಯೆ

Prakhara News
1 Min Read

ಧಾರವಾಡ: ಧಾರವಾಡದಲ್ಲಿ 19 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ.

ಕೊಲೆಯಾದ ವಿದ್ಯಾರ್ಥಿನಿ ಧಾರವಾಡದ ಗಾಂಧಿ ಚೌಕ್ ನಿವಾಸಿ ಝಕಿಯಾ ಮುಲ್ಲಾ (19). ಝಕಿಯಾ ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿದ್ದು , ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಮಂಗಳವಾರ ಸಂಜೆ ಮನೆಯಿಂದ ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಯುವತಿ, ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು.

ಜ.21 ರಂದು ಮುಂಜಾನೆ ಮನಸೂರು ರಸ್ತೆಯ ಶಾಸಕ ವಿನಯ್ ಕುಲಕರ್ಣಿ ಅವರ ವಿನಯ್ ಡೈರಿ ಸಮೀಪ ಯುವತಿಯ ಶವ ಪತ್ತೆಯಾಗಿದೆ. ಬೇರೆ ಯಾವುದೋ ಸ್ಥಳದಲ್ಲಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಇಲ್ಲಿಗೆ ತಂದು ಶವವನ್ನು ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಗಳು ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಯುವತಿಯ ಮೊಬೈಲ್ ಕರೆಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಹತ್ಯೆಗೆ ಕಾರಣವೇನು ಎಂಬುವುದು ತನಿಖೆಯಿಂದ ತಿಳಿದುಬರಬೇಕಿದೆ.

Share This Article
Leave a Comment