ನವದೆಹಲಿ : ಶೀತ, ಜ್ವರ, ಅಲರ್ಜಿ ಹಾಗೂ ನೋವಿಗೆ ಬಳಸುವ ವ್ಯಾಪಕ ಮಾರಾಟದ ಕನಿಷ್ಟ 156 ಸ್ಥಿರ-ಡೋಸ್ ಸಂಯೋಜನೆ (FDC) ಔಷಧಿಗಳನ್ನ ಕೇಂದ್ರ ಸರ್ಕಾರ ನಿಷೇಧಿಸಿದೆ. ಎಫ್‌ಡಿಸಿ ಔಷಧಿಗಳು ಎರಡು ಅಥವಾ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳ ಸಂಯೋಜನೆಯನ್ನ ನಿಗದಿತ ಅನುಪಾತದಲ್ಲಿ ಹೊಂದಿರುತ್ತವೆ ಮತ್ತು ಅವುಗಳನ್ನ ಕಾಕ್ಟೈಲ್ ಔಷಧಿಗಳು ಎಂದೂ ಕರೆಯಲಾಗುತ್ತದೆ. ಆಗಸ್ಟ್ 12 ರಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ಉನ್ನತ ಫಾರ್ಮಾ ಕಂಪನಿಗಳು ತಯಾರಿಸಿದ ನೋವು ನಿವಾರಕ ಔಷಧಿಗಳಾಗಿ ಬಳಸುವ ಜನಪ್ರಿಯ ಸಂಯೋಜನೆಗಳಲ್ಲಿ ಒಂದಾದ ‘ಅಸೆಕ್ಲೊಫೆನಾಕ್ 50 ಮಿಗ್ರಾಂ + ಪ್ಯಾರಸಿಟಮಾಲ್ 125 ಮಿಗ್ರಾಂ ಮಾತ್ರೆ’ಯನ್ನ ಸರ್ಕಾರ ನಿಷೇಧಿಸಿದೆ. ಈ ಪಟ್ಟಿಯಲ್ಲಿ – ಮೆಫೆನಾಮಿಕ್ ಆಸಿಡ್ + ಪ್ಯಾರಸಿಟಮಾಲ್ ಇಂಜೆಕ್ಷನ್, ಸೆಟಿರಿಜೈನ್ ಎಚ್ಸಿಎಲ್ + ಪ್ಯಾರಸಿಟಮಾಲ್ + ಫೆನೈಲೆಫ್ರಿನ್ ಎಚ್ಸಿಎಲ್, ಲೆವೊಸೆಟಿರಿಜೈನ್ + ಫೆನೈಲೆಫ್ರಿನ್ ಎಚ್ಸಿಎಲ್ + ಪ್ಯಾರಸಿಟಮಾಲ್, ಪ್ಯಾರಸಿಟಮಾಲ್ + ಕ್ಲೋರ್ಫೆನಿರಮೈನ್ ಮಾಲೇಟ್ + ಫಿನೈಲ್ ಪ್ರೊಪನೊಲಮೈನ್ ಮತ್ತು ಕ್ಯಾಮೈಲೋಫಿನ್ ಡೈಹೈಡ್ರೊಕ್ಲೋರೈಡ್ 25 ಮಿಗ್ರಾಂ + ಪ್ಯಾರಸಿಟಮಾಲ್ 300 ಮಿಗ್ರಾಂ ಸೇರಿವೆ. ಪ್ಯಾರಸಿಟಮಾಲ್, ಟ್ರಾಮಾಡೋಲ್, ಟೌರಿನ್ ಮತ್ತು ಕೆಫೀನ್ ಸಂಯೋಜನೆಯನ್ನು ಕೇಂದ್ರವು ನಿಷೇಧಿಸಿದೆ. ಟ್ರಾಮಾಡೋಲ್ ಓಪಿಯಾಡ್ ಆಧಾರಿತ ನೋವು ನಿವಾರಕವಾಗಿದೆ. ಈ ಎಫ್‌ಡಿಸಿಗಳನ್ನ ತರ್ಕಬದ್ಧವಲ್ಲ ಎಂದು ಪರಿಗಣಿಸಿದ ಕೇಂದ್ರವು ನೇಮಿಸಿದ ತಜ್ಞರ ಸಮಿತಿಯು ಈ ವಿಷಯವನ್ನ ಪರಿಶೀಲಿಸಿದೆ ಎಂದು ಅದು ಹೇಳಿದೆ. “ಎಫ್ಡಿಸಿ ಮಾನವರಿಗೆ ಅಪಾಯವನ್ನು ಒಳಗೊಂಡಿರಬಹುದು. ಆದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ 1940ರ ಸೆಕ್ಷನ್ 26ಎ ಅಡಿಯಲ್ಲಿ ಈ ಎಫ್ಡಿಸಿಯ ಉತ್ಪಾದನೆ, ಮಾರಾಟ ಅಥವಾ ವಿತರಣೆಯನ್ನು ನಿಷೇಧಿಸುವುದು ಅಗತ್ಯವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.