ಮಂಗಳೂರು: ಇತ್ತೀಚಿಗೆ ಕರಾವಳಿಯಲ್ಲಿ ಸಮೂಹ ಸನ್ನಿಗೊಳಗಾದವರಂತೆ ವಿವಿಧ ಸಂಘಸಂಸ್ಥೆಗಳು ಆಟಿಡೊಂಜಿ ದಿನ, ಕೆಸರ್‌ಡೊಂಜಿ ದಿನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ.
ಅದೇ ರೀತಿ ಕಳೆದ ರವಿವಾರ 4ಬೀಟ್ಸ್ ತಂಡದಿಂದ ಯೆಯ್ಯಾಡಿಯಲ್ಲಿ ನಡೆದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಎಡವಟ್ಟು ಆಗಿದ್ದು, ತುಳುವರು ಗರಂ ಆಗಿದ್ದಾರೆ. ಕಾರ್ಯಕ್ರಮದಲ್ಲಿ ತುಳುಗೀತೆಯೊಂದಕ್ಕೆ ಕವಿತಾ ಎಂಬ ಮಹಿಳೆಯೊಬ್ಬರು ದೈವಾವೇಶಕ್ಕೆ ಒಳಗಾದವರಂತೆ, ಕೊಡಿಯಡಿಯಲ್ಲಿ ದೈವ ನರ್ತಿಸುವಂತೆ ಕುಣಿದಿದ್ದಾರೆ. ಇದರ ವೀಡಿಯೋ ಈಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತುಳುವರು ಗರಂ ಆಗಿದ್ದಾರೆ.
ಅದರಲ್ಲೂ ತುಳುಪರ ಹೋರಾಟಗಾರ ರೋಶನ್ ಅವರು ಸಂಘಟನೆಯ ಆಯೋಜಕರಿಗೆ, ದೈವ ನರ್ತನವನ್ನು ಅನುಕರಣೆ ಮಾಡಿರುವ ಮಹಿಳೆಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆ ದೈವಸ್ಥಾನದ ಎದುರು ನಿಂತು ಕ್ಷಮೆ ಯಾಚಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಆಡಿಯೋ ಕೂಡಾ ವೈರಲ್ ಆಗಿದೆ.
ಕಾರ್ಯಕ್ರಮ ಆಯೋಜಿಸಿದ 4ಬೀಟ್ಸ್ ತಂಡ ಆ ಬಳಿಕ ವೀಡಿಯೋ ಮಾಡಿ ದೈವ ನರ್ತನದ ಅನುಕರಣೆ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರು ಭಕ್ತಿಯಿಂದ ನರ್ತಿಸಿದ್ದೇ ಹೊರತು, ಅವಮಾನ ಮಾಡಿದ್ದಲ್ಲ ಎಂದು ಸಮರ್ಥಿಸಿಕೊಂಡಿದೆ. ಆದರೆ ದೈವನರ್ತನ, ದೈವಾವೇಶದ ಬಗ್ಗೆ ಕರಾವಳಿಗರಿಗೆ ಅದರದ್ದೇ ಆದ ನಂಬಿಕೆ, ಭಕ್ತಿಯಿದೆ. ದೈವದ ಚಪ್ಪರದಡಿ ನಡೆಯಬೇಕಿದ್ದ ಆಚರಣೆಯೊಂದು ಮನೋರಂಜನಾ ಕಾರ್ಯಕ್ರಮವಾಗಿ ಬಳಕೆಯಾಗಿರುವುದು ತುಳುವರ ಕೆಂಗಣ್ಣಿಗೆ ಗುರಿಯಾಗಿದೆ. ಸದ್ಯ ತುಳುವರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಂಘಟಕರು ಹಾಗೂ ದೈವ ಆವೇಶದ ಅನುಕರಣೆ ಮಾಡಿರುವ ಮಹಿಳೆ ತೆಪ್ಪಗಾಗಿದ್ದಾರೆ ಎಂದು ತಿಳಿದು ಬಂದಿದೆ.