ಪಬ್ಜಿ ಗೇಮ್ ಗೀಳು ಹೊಂದಿದ್ದ ಪಾಕಿಸ್ತಾನದ ಮಹಿಳೆಯೊಬ್ಬಳು ಈ ಆಟ ಆಡುವಾಗ ತನಗೆ ಪರಿಚಯವಾದ ಭಾರತದ ವ್ಯಕ್ತಿಯನ್ನು ಭೇಟಿಯಾಗುವ ಸಲುವಾಗಿ ತನ್ನ ನಾಲ್ಕು ಮಕ್ಕಳ ಜೊತೆ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
20 ವರ್ಷದ ಈ ಮಹಿಳೆಗೆ ಪಬ್ಜಿ ಗೇಮ್ ಆಡುವಾಗ ನೋಯ್ಡಾ ಮೂಲದ ಸಚಿನ್ ಎಂಬಾತನ ಪರಿಚಯವಾಗಿದ್ದು, ಬಳಿಕ ಇದು ಪ್ರೀತಿಗೆ ತಿರುಗಿದೆ.
ನಿನ್ನನ್ನು ಭೇಟಿಯಾಗಬೇಕು ಎಂಬ ಬಯಕೆಯನ್ನು ಆಕೆ ವ್ಯಕ್ತಪಡಿಸಿದ್ದು, ಸಚಿನ್ ಕೂಡ ಇದಕ್ಕೆ ಸಮ್ಮತಿಸಿದ್ದಾನೆ.
ಬಳಿಕ ಈ ಮಹಿಳೆ ತನ್ನ 4 ಮಕ್ಕಳ ಜೊತೆ ನೇಪಾಳ ತಲುಪಿದ್ದು, ಅಲ್ಲಿಂದ ಗಡಿ ದಾಟಿ ಉತ್ತರ ಪ್ರದೇಶದ ಮೂಲಕ ನೋಯ್ಡಾಗೆ ಬಂದಿದ್ದಾಳೆ. ಸಚಿನ್ ಆಕೆಗೆ ಮನೆ ಮಾಡಿಕೊಟ್ಟಿದ್ದು, ಪೊಲೀಸರಿಗೆ ಈ ವಿಚಾರ ತಿಳಿಯುತ್ತಿದ್ದಂತೆ, ಮಹಿಳೆ ಮತ್ತಾಕೆಯ ಮಕ್ಕಳನ್ನು ವಶಕ್ಕೆ ಪಡೆದು ಸಚಿನ್ ಹಾಗೂ ಮನೆ ಬಾಡಿಗೆ ನೀಡಿದ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.