Home ಕರಾವಳಿ ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಮಂಗಳೂರು ದಸರಾಕ್ಕೆ ಚಾಲನೆ

ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಮಂಗಳೂರು ದಸರಾಕ್ಕೆ ಚಾಲನೆ

0

ಮಂಗಳೂರು: ವಿಶ್ವವಿಖ್ಯಾತ ಮಂಗಳೂರು ದಸರಾದ ಹಿನ್ನಲೆಯಲ್ಲಿ ನಗರದ ಶ್ರೀಕ್ಷೇತ್ರ‌ ಕುದ್ರೋಳಿಯ ಕೊರಗಪ್ಪ ಸಭಾಂಗಣದಲ್ಲಿ ಶ್ರೀ ಶಾರದಾ ಮಾತೆ, ಶ್ರೀ ಮಹಾಗಣಪತಿ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ರವಿವಾರ ಬೆಳಗ್ಗೆ ನೆರವೇರಿತು.


ಶ್ರೀಕ್ಷೇತ್ರ ಕುದ್ರೋಳಿಯ ಅಭಿವೃದ್ಧಿ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಉಪಸ್ಥಿತಿಯಲ್ಲಿ ಶಾರದಾಮಾತೆಯ ಪ್ರತಿಷ್ಠಾಪನೆ ನೆರವೇರಿತು. ಕರ್ಣಾಟಕ ಬ್ಯಾಂಕ್ ಸಿಇಒ ಪ್ರದೀಪ್ ಕುಮಾರ್ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು. ಈ ಬಾರಿ ಕಣ್ಮನ ಸೆಳೆಯುವ ದಸರಾ ದರ್ಬಾರ್ ಮಂಟಪ ಎಲ್ಲರ ವಿಶೇಷವಾಗಿದೆ. ಶಿಲಾಬಾಲಿಕೆಯರು, ವಿವಿಧ ದೇವರುಗಳ ಕಲಾಕೃತಿಗಳು ದರ್ಬಾರ್ ಮಂಟಪದ ಕಂಬಕಂಬಗಳಲ್ಲಿ ರಾರಾಜಿಸುತ್ತಿದ್ದಾರೆ. ಸಾಮಾನ್ಯ ನವದುರ್ಗೆಯರನ್ನು ಮಂಟಪದೊಳಗಡೆ ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರತ್ಯೇಕ ಗುಡಿಗಳನ್ನು ನಿರ್ಮಿಸಿ ಅದರೊಳಗಡೆ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗಿದೆ.

ಮಂಟಪದ ಮೇಲ್ಗಡೆ ಸ್ವಯಂಚಾಲಿತವಾಗಿ ತಿರುಗುವ ಮೇಲ್ಛಾವಣಿಯನ್ನು ಅತ್ಯಾಕರ್ಷಕವಾಗಿ ರಚಿಸಲಾಗಿದೆ. ದರ್ಬಾರ್ ಮಂಟಪ ಹೊಕ್ಕುವಂತೆಯೇ ಎಡಬಲ ಬದಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಶ್ರೀ ಗೋಕರ್ಣನಾಥ ದೇವರ ಬೃಹತ್ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಸುಮಾರು 50 ಅಧಿಕ ಬೃಹತ್ ಗಾತ್ರದ ಕಂಬಗಳು, ಅದರ ಕೆತ್ತನೆಗಳು ಬೇಲೂರು – ಹಳೆಬೀಡು ದೇವಾಲಯ ಮಾದರಿಯನ್ನು ನೆನಪಿಸುತ್ತದೆ. ಎಲ್ಲೆಡೆ ಕಣ್ಣುಕೋರೈಸುವ ವಿದ್ಯುತ್ ದೀಪಾಲಂಕಾರದಲ್ಲಿ ದೇವಲೋಕವೇ ಧರೆಗಿಳಿದಂತೆ ಭಾಸವಾಗುತ್ತಿದೆ. ಮುಲ್ಕಿಯ ಚಂದ್ರಶೇಖರ ಸುವರ್ಣ ಅವರ ಸುವರ್ಣ ಆರ್ಟ್ಸ್ ತಂಡ ಈ ದಸರಾ ಮಂಟಪವನ್ನು ನಿರ್ಮಾಣ ಮಾಡಿದೆ.

LEAVE A REPLY

Please enter your comment!
Please enter your name here