Home ಕರಾವಳಿ ಸಿಬಂದಿಗೆ ಲೈಂಗಿಕವಾಗಿ ಹಿಂಸಿಸುವ ವೈದ್ಯರನ್ನು ಬಿಡಲು ಸಾಧ್ಯವಿಲ್ಲ : ಹೈಕೋರ್ಟ್‌…!!

ಸಿಬಂದಿಗೆ ಲೈಂಗಿಕವಾಗಿ ಹಿಂಸಿಸುವ ವೈದ್ಯರನ್ನು ಬಿಡಲು ಸಾಧ್ಯವಿಲ್ಲ : ಹೈಕೋರ್ಟ್‌…!!

0
ಕುಂದಾಪುರ ಪೊಲೀಸ್ ಠಾಣೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಬಂದಿಗೆ ಲೈಂಗಿಕವಾಗಿ ಹಿಂಸಿಸುವ ವೈದ್ಯರನ್ನು ಬಿಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್‌, ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಲ್ಲಿ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್‌ ರೆಬೆಲ್ಲೋ  ವಿರುದ್ಧ ಸಲ್ಲಿಸಿರುವ ಕ್ರಿಮಿನಲ್‌ ಪ್ರಕರಣವನ್ನು ಕೈ ಬಿಡಲು ನಿರಾಕರಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ತನ್ನ ವಿರುದ್ಧ ಕುಂದಾಪುರ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್‌ ರದ್ದುಪಡಿಸುವಂತೆ ಕೋರಿ ಡಾ.ರಾಬರ್ಟ್‌ ರೆಬೆಲ್ಲೋ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಕೋರ್ಟ್‌ ಮುಂದಿರುವ ದಾಖಲೆಗಳಿಂದ ಅರ್ಜಿದಾರನು ದೂರುದಾರ ವೈದ್ಯಗೆ ಕಿರುಕುಳ ನೀಡುವುದು ತಿಳಿಯುತ್ತಿದೆ. ಈ ಹಂತದಲ್ಲಿ ಎಫ್ಐಆರ್‌ ರದ್ದುಪಡಿಸಲಾಗದು ಎಂದು ಹೇಳಿತು.
ಪ್ರಕರಣ ಸಂಬಂಧ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಲಿ. ಅನಂತರ ಆರೋಪಗಳನ್ನು ಕೈಬಿಡಲು ಕೋರಿ ಆರೋಪಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಹೇಳಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ವೈದ್ಯರ ಪರ ವಕೀಲರು ತಮ್ಮ ಅರ್ಜಿ ಹಿಂಪಡೆದರು.
ಪ್ರಕರಣದಲ್ಲಿ ಸಂತ್ರಸ್ತೆ ವೈದ್ಯೆಗೆ ಆರೋಪಿ ವೈದ್ಯ ಮಧ್ಯರಾತ್ರಿ ಊಟಕ್ಕೆ ಕರೆದ, ಅಶ್ಲೀಲ ಸಂದೇಶ ಕಳುಹಿಸಿದ ಮತ್ತು ಆಕೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ತನಿಖಾ ದಾಖಲೆಗಳಿಂದ ತಿಳಿದ ನ್ಯಾಯಮೂರ್ತಿಗಳು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವೈದ್ಯರ ಪರ ವಕೀಲರು ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲ ಎಂದು ಸಮರ್ಥಿಸಿಗೊಂಡರು. ಈ ವೇಳೆ ನ್ಯಾಯಮೂರ್ತಿಗಳು, ಏಕೆ ಮಧ್ಯರಾತ್ರಿ ಸಂದೇಶ ಕಳುಹಿಸಲಾಗಿದೆ ಹಾಗೂ ಕರೆ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಅರ್ಜಿದಾರ ವಕೀಲರು, ಯಾವುದೇ ಅಶ್ಲೀಲ ಅಥವಾ ಅಪರಾಧ ಸಂದೇಶವನ್ನು ಅರ್ಜಿದಾರರು ದೂರುದಾರೆಗೆ ಕಳುಹಿಸಿಲ್ಲ ಎಂದು ಉತ್ತರಿಸಿದರು.
ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಮತ್ತೇನು? ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ ಮಸೇಜ್‌ ಕಳುಹಿಸಿದ್ದೀರಾ? ಎಂದು ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲರು, ಅದು ಸಹ ಇದೆ. ಕೆಲ ಚರ್ಚೆಯ ಸಂದೇಶ ಕಳುಹಿಸಲಾಗಿದೆ. ಅವು ಅಪರಾಧದ ಸಂದೇಶಗಳಲ್ಲ. ದೂರುದಾರೆ ಸಹ ಆರೋಪಿಯ ಸಂದೇಶಕ್ಕೆ ಉತ್ತರಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.
ನೀವು ಯಾವ ಸಂದೇಶ ಕಳುಹಿಸಿದ್ದೀರಾ? ಎಂಬ ಬಗ್ಗೆ ದಾಖಲೆಗಳು ಕೋರ್ಟ್‌ ಮುಂದಿವೆ. ಅವುಗಳನ್ನು ನಿಮಗೆ ನೀಡಲೇ? ತಡರಾತ್ರಿ ಊಟಕ್ಕೆ ಬರುವಂತೆ ದೂರುದಾರೆಗೆ ಏಕೆ ಹೇಳುತ್ತಿದ್ದೀರಿ? ಅರ್ಜಿದಾರರು ಸರಕಾರಿ ನೌಕರ. ದೋಷಾರೋಪ ಪಟ್ಟಿ ಸಲ್ಲಿಸಿದ ಅನಂತರ ಎಲಾ ಸಂಗತಿಗಳು ತಿಳಿಯಲಿವೆ ಎಂದು ನ್ಯಾಯಮೂರ್ತಿಗಳು ಹೇಳಿದರು.

LEAVE A REPLY

Please enter your comment!
Please enter your name here