ಪುತ್ತೂರು: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಆರೋಪಿಯನ್ನು ಈಗಾಗಲೇ ನ್ಯಾಯಾಲಯ ನಿರಪರಾಧಿಯೆಂದು ಘೋಷಿಸಿದ್ದು, ಪ್ರಕರಣವನ್ನು ತಕ್ಷಣದಿಂದಲೇ ಮರು ತನಿಖೆ ನಡೆಸಿ ನೈಜ ಆರೋಪಿಯನ್ನು ಬಂಧಿಸಬೇಕು. ಇಲ್ಲದಿದ್ದರೆ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ತೀವ್ರ ಸ್ವರೂಪದ ಹೋರಾಟವನ್ನು ನಡೆಸಲಾಗುವುದು ಎಂದು ಸಂಘ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 2011 ರಲ್ಲಿ ಸೌಜನ್ಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು, 11 ವರ್ಷಗಳು ಕಳೆದಿದೆ. ಈ ಸಂದರ್ಭದಲ್ಲಿ ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದು ಆತ ನಿರಪರಾಧಿಯೆಂದು ಈಗ ಸಾಬೀತಾಗಿದೆ. ಆದರೆ ನೈಜ ಆರೋಪಿಗಳು ಯಾರು ಎಂಬುದನ್ನು ಪತ್ತೆಹಚ್ಚಲಾಗಿಲ್ಲ. ತಕ್ಷಣ ಮರು ತನಿಖೆ ನಡೆಸಿ ನೈಜ ಆರೋಪಿಯನ್ನು ಬಂಧಿಸಿ ಸೂಕ್ತ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಕೊಲೆ ನಡೆದ ಸಂದರ್ಭ ಸಂಘದ ವತಿಯಿಂದ ಆದಿಚುಂಚನಗಿರಿ ಕ್ಷೇತ್ರ ಮಂಗಳೂರು ಶಾಖಾ ಮಠದ ಸ್ವಾಮೀಜಿಯವರೊಂದಿಗೆ ಜತೆಗೂಡಿ ಸಂಬಂಧ ಪಟ್ಟವರ ಮನೆಗೆ ತೆರಳಿ ಸಾಂತ್ವನ ಹೇಳಿ ಆರ್ಥಿಕ ಸಹಕಾರ ನೀಡಿದ್ದೇವೆ. ಇದೀಗ 11 ವರ್ಷಗಳ ಬಳಿಕ ಮತ್ತೆ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಈ ಕುರಿತು ಎಲ್ಲಾ ತಾಲೂಕು ಸಂಘದ ಮುಖ್ಯಸ್ಥರ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆಗಳನ್ನು ಮಾಡಲಾಗುವುದು. ಈಗಾಗಲೇ ಸಾಮಾಜಿಕ ಕಳಕಳಿಯುಳ್ಳ ಸಂಘಟನೆಗಳು ಹೋರಾಟ ಮಾಡುತ್ತಿದ್ದು, ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಖಜಾಂಚಿ ಲಿಂಗಪ್ಪ ಗೌಡ, ಮಹಿಳಾ ಪ್ರತಿನಿಧಿ ಉಷಾಮಣಿ ಉಪಸ್ಥಿತರಿದ್ದರು.