ಹೊಸ ಬಾವಿ ತೋಡುವಾಗ ದುರಂತ; 30 ಅಡಿ ಎತ್ತರದಿಂದ ತಲೆ ಮೇಲೆ ಬಿದ್ದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ , ಕಾರ್ಮಿಕ ಸಾವು

Prakhara News
1 Min Read

ಮಂಗಳೂರು : ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಲಾತ್ ನಗರದಲ್ಲಿ ಹೊಸ ಬಾವಿ ಕೊರೆಯುತ್ತಿದ್ದ ವೇಳೆ ಕ್ರೇನ್‌ನಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಕಳಚಿ ಬಿದ್ದ ಪರಿಣಾಮ ಶಿವಮೊಗ್ಗ ಮೂಲದ ವಲಸೆ ಕಾರ್ಮಿಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಲ್ಲಾಪುರ ನಿವಾಸಿ ಶಿವಕುಮಾರ್ ಜಿ.ಕೆ. (30) ಮೃತಪಟ್ಟವರು. ಸಲಾತ್ ನಗರದ ಖಾಲಿ ಸೈಟೊಂದರಲ್ಲಿ ಆರು ಮಂದಿ ಕಾರ್ಮಿಕರು ಹೊಸ ಬಾವಿ ಅಗೆಯುವ ಕೆಲಸ ಮಾಡುತ್ತಿದ್ದರು. ಸಂಜೆ 4.30ರ ಸುಮಾರಿಗೆ ಶಿವಕುಮಾರ್ ಸೇರಿದಂತೆ ಮೂವರು ಕಾರ್ಮಿಕರು 30 ಅಡಿ ಆಳದ ಬಾವಿಯೊಳಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಕ್ರೇನ್ ಮೂಲಕ ಮಣ್ಣು ತುಂಬಿದ ಕಬ್ಬಿಣದ ಬಕೆಟ್‌ ಅನ್ನು ಮೇಲಕ್ಕೆ ಎತ್ತುವ ಸಂದರ್ಭದಲ್ಲಿ, ಅದು ಅಚಾನಕ್ ಆಗಿ ಕೊಕ್ಕೆಯಿಂದ ಬೇರ್ಪಟ್ಟು ನೇರವಾಗಿ ಶಿವಕುಮಾರ್ ಅವರ ತಲೆಯ ಮೇಲೆ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಕೂಡಲೇ ಮೇಲಕ್ಕೆತ್ತಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಬಾವಿಯಲ್ಲಿದ್ದ ಇತರ ಇಬ್ಬರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಶಿವಕುಮಾರ್ ಪತ್ನಿ ಹಾಗೂ ಮೂರು ವರ್ಷದ ಗಂಡು ಮತ್ತು ಒಂದು ವರ್ಷದ ಹೆಣ್ಣು ಮಗುವಿನೊಂದಿಗೆ ತೊಕ್ಕೊಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ

Share This Article
Leave a Comment