ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಶೂಟ್ಔಟ್ ಪ್ರಕರಣ ತನಿಖೆಯಲ್ಲಿ ಭಾರಿ ತಿರುವು ಪಡೆದುಕೊಂಡಿದೆ. ಅದಾನಿ ಯುಪಿಸಿಎಲ್ (UPCL) ಕಂಪೆನಿಯ ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕೈತಪ್ಪಿದ ಆಕ್ರೋಶಕ್ಕೆ ಉಚ್ಚಿಲದ ಗುತ್ತಿಗೆದಾರ ಕಿಶೋರ್ ರಾಮ ಪೂಜಾರಿ ತನ್ನ ಸಹೋದರ, ಭೂಗತ ಪಾತಕಿ ಹೇಮಂತ್ ಪೂಜಾರಿ ಮೂಲಕ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ತಿಳಿಸಿದ್ದಾರೆ.


ಉಚ್ಚಿಲ ನಿವಾಸಿ ಕಿಶೋರ್ ರಾಮ ಪೂಜಾರಿ ಈ ಹಿಂದೆ ಯುಪಿಸಿಎಲ್ ನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದನು. ಆರು ತಿಂಗಳ ಹಿಂದೆ ಎರ್ಮಾಳಿನಲ್ಲಿ ಯುಪಿಸಿಎಲ್ ಕಂಪೆನಿಯ ಪೈಪ್ಲೈನ್ ಮತ್ತು ಕಾಂಕ್ರಿಟ್ ರಸ್ತೆ ಕಾಮಗಾರಿ ಯೋಜನೆಯ ಗುತ್ತಿಗೆಯನ್ನು ತನಗೆ ನೀಡುವಂತೆ ಕಿಶೋರ್ ಪೂಜಾರಿ ಕೇಳಿ ಕೊಂಡಿದ್ದನು. ಅದಕ್ಕೆ ಕಂಪೆನಿಯವರು ಕೂಡ ಒಪ್ಪದೆ ಡೇವಿಡ್ ಡಿಸೋಜಗೆ ನೀಡಿದ್ದರು. ಈ ಕೋಟ್ಯಂತರ ರೂ. ಮೊತ್ತದ ಯೋಜನೆ ಕೈತಪ್ಪಿ ಹೋದ ಸಿಟ್ಟಿನಲ್ಲಿ ಕಿಶೋರ್ ಪೂಜಾರಿ ಈ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ ಎಂದು ಎಸ್ಪಿ ತಿಳಿಸಿದರು.

ಯುಪಿಸಿಎಲ್ನ ಪೈಪ್ಲೈನ್ ಮತ್ತು ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ತನಗೆ ನೀಡದೆ ಡೇವಿಡ್ ಡಿಸೋಜಗೆ ನೀಡಿದ್ದಕ್ಕೆ ಸಿಟ್ಟಿಗೆದ್ದ ಕಿಶೋರ್, ಡೇವಿಡ್ ಹತ್ಯೆಗೆ 10 ಲಕ್ಷ ರೂ. ಸುಪಾರಿ ನೀಡಿದ್ದನು. ಪ್ರಕರಣದಲ್ಲಿ ಭಾಗಿಯಾದ ರಾಜು, ಅನ್ಮೋಲ್, ಜಿಯಾಹುಲ್ ಸೇರಿದಂತೆ ಹಣಕಾಸಿನ ನೆರವು ನೀಡಿದ ಮೊಹಮ್ಮದ್ ಇರ್ಷಾದ್, ಚಿರಾಗ್ ಹಾಗೂ ಸದಾನಂದ ಅವರನ್ನು ಬಂಧಿಸಲಾಗಿದೆ. ಬಿಹಾರದ ಸೂರಜ್ ನೀಡಿದ ಸುಳಿವು ಆಧರಿಸಿ, ಮುಂಬೈನ ಶೂಟರ್ಗಳನ್ನು ವ್ಯವಸ್ಥೆ ಮಾಡಿದ್ದ ನಟೋರಿಯಸ್ ಗ್ಯಾಂಗ್ಸ್ಟರ್ ಅನುಜ್ ಪಾಟೀಲ್ ನನ್ನು ಬೆಳಗಾವಿಯ ನಿಪ್ಪಾಣಿಯಲ್ಲಿ ಬಂಧಿಸಲಾಗಿದೆ.

ಬಂಧಿತ ಮುಖ್ಯ ಆರೋಪಿ ಅನುಜ್ ಪಾಟೀಲ್ನನ್ನು ಉಡುಪಿಗೆ ಕರೆತರುವಾಗ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕೊಲ್ಲೂರು ಎಸ್ಐ ಅವರ ಆಯುಧ ಕಸಿದು ಫೈರಿಂಗ್ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಕುಂದಾಪುರ ಎಸ್ಐ ನಂಜ ನಾಯ್ಕ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಗಾಯಾಳು ಅನುಜ್ನನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ವಿರುದ್ಧ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 11ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎಂದು ಎಸ್ಪಿ ವಿವರಿಸಿದ್ದಾರೆ.


