ಉಡುಪಿ: ವ್ಯಕ್ತಿಯ ಅಪಹರಣ ಪ್ರಕರಣ- ಆರೋಪಿಗಳ ಬಂಧನ..!!

Prakhara News
2 Min Read

ಮಣಿಪಾಲ: ಮಣಿಪಾಲ ಕೆಎಂಸಿ ಆಸ್ಪತ್ರೆ ಹೊರಭಾಗದಲ್ಲಿ ವ್ಯಕ್ತಿಯನ್ನು ಬಲವಂತವಾಗಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೆಲಂಗಾಣದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ ಮಾರ್ಚ್ 31 ರಾತ್ರಿ 8.15 ಗಂಟೆ ಸುಮಾರಿಗೆ ಕುಂದಾಪುರ ತಾಲೂಕಿನ ದಾಸರಮಕ್ಕಿ ನಿವಾಸಿ ರಾಮ ಮಡಿವಾಳ ಅವರು ತಮ್ಮ ತಮ್ಮ ಲಕ್ಷ್ಮಣರಿಗೆ ಚಿಕಿತ್ಸೆ ನೀಡಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಚಿಕಿತ್ಸೆ ಬಳಿಕ ಆಸ್ಪತ್ರೆಯ ಕ್ಯಾಂಟೀನಿನಲ್ಲಿ ರಾಮ ಮಡಿವಾಳ, ಅವರ ಅಣ್ಣ ರಾಜೇಶ್ ಹಾಗೂ ಸುಧೀರ್ ಟೀ ಕುಡಿಯುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 12.15 ಗಂಟೆಗೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಕಾರಿನಲ್ಲಿ ಏಳು-ಎಂಟು ಮಂದಿ ಬಂದು ರಾಜೇಶ್ ಅವರನ್ನು ಬಲವಂತವಾಗಿ ಹಿಡಿದು ಕಾರಿನಲ್ಲಿ ಕೂರಿಸಿ ಅಪಹರಿಸಿ ಮಣಿಪಾಲದಿಂದ ಹಿರಿಯಡ್ಕ ರಸ್ತೆಯ ಕಡೆಗೆ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ನೀಡಿದ ದೂರಿನ ಮೇರೆಗೆ ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವರ್ ಹಾಗೂ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ವ್ಯವಹಾರ ಸಂಬಂಧಿತ ವಿಚಾರದಲ್ಲಿ ಈ ಹಿಂದೆ ಪಿರ್ಯಾದಿದಾರರ ಮನೆಗೆ ಬಂದಿದ್ದು, ಅದೇ ಹಿನ್ನೆಲೆಯಲ್ಲಿ ಅಪಹರಣ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣ ಪತ್ತೆಗಾಗಿ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡದಲ್ಲಿ ಪಿಎಸ್ಐ ತಿಮ್ಮೇಶ್ ಬಿ.ಎನ್., ಸೈಬರ್ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನ್ ದೊಡ್ಡಮನಿ ಸೇರಿದಂತೆ ಅಪರಾಧ ಸಿಬ್ಬಂದಿ ಭಾಗವಹಿಸಿದ್ದರು.

ತನಿಖೆಯ ಸಂದರ್ಭದಲ್ಲಿ ಆರೋಪಿಗಳ ಸುಳಿವು ಪತ್ತೆಯಾಗಿ, ಪಿಎಸ್ಐ ಸುದರ್ಶನ್ ನೇತೃತ್ವದ ತಂಡವು ತೆಲಂಗಾಣ ರಾಜ್ಯದ ಜಗತಿಹಾಳ್ ಜಿಲ್ಲೆಯ ಕರೀಂನಗರದ ಗೋವಿಂದಪಳ್ಳಿ ಪ್ರದೇಶದ ಸಿಲ್ವರ್ ಸ್ಕೈ ಲಾಡ್ಜ್ನಲ್ಲಿ ಏಪ್ರಿಲ್ 9 ರಂದು ಮುಂಜಾನೆ 3.30 ಗಂಟೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಈ ವೇಳೆ ಅಪಹರಣಕ್ಕೆ ಬಳಸಿದ TG 05 C 1716 ನಂಬರಿನ ಕಿಯಾ ಕ್ಯಾರೆನ್ಸ್ ಕಾರು ಹಾಗೂ ನಂಬರ್ ಪ್ಲೇಟ್ ಇಲ್ಲದ ಮಹಿಂದ್ರ ಥಾರ್ ಕಾರನ್ನು ವಶಪಡಿಸಿಕೊಂಡು, ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment