ಉಪ್ಪಿನಂಗಡಿ: ಕಾರಿನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿ ರಜಾಕ್ (43) ಬಂಧಿತ ಆರೋಪಿ.ದಿನಾಂಕ ಅಕ್ಟೋಬರ್ 1 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್ ಹೆಚ್ ರವರು ಮತ್ತು ಸಿಬ್ಬಂದಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ವಾಹನ ತಪಾಸಣೆ ಮಾಡುವ ಸಮಯ ಸುಮಾರು 4 ಗಂಟೆಗೆ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಪ್ಪು ಕಾರೊಂದನ್ನು ನಿಲ್ಲಿಸುವಂತೆ ಸೂಚಿಸಿದಾಗ ಅದರ ಚಾಲಕ ನಿಲ್ಲಿಸದೇ ದೂರದಲ್ಲಿ ನಿಲ್ಲಿಸಿ ಚಾಲಕ ಇಳಿದು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಕೂಡಲೇ ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್ ಮತ್ತು ಸಿಬ್ಬಂದಿ ಓಡಿಹೋಗಿ ಚಾಲಕನನ್ನು ಹಿಡಿದುಕೊಂಡು ವಿಚಾರಿಸಿದಾಗ ಸರಿಯಾಗಿ ಉತ್ತರವನ್ನು ಹೇಳದೆ ಅಸ್ಪಷ್ಟವಾಗಿ, ತೊದಲುತ್ತಾ ಅಮಲು ಪದಾರ್ಥ ಅಥವಾ ಮಾದಕ ವಸ್ತುವನ್ನು ಸೇವನೆ ಮಾಡಿರುವಂತೆ ಮಾತನಾಡುತ್ತಿರುವುದು ಕಂಡು ಆತನ ಬಗ್ಗೆ ಅನುಮಾನಗೊಂಡು ಅವನ ಹೆಸರು ವಿಳಾಸವನ್ನು ಕೇಳಿದ್ದಾರೆ. ಆಗ ಆತ ತಾನು ರಜಾಕ್ ಉಪ್ಪಿನಂಗಡಿಯ ಮಠನಿವಾಸಿ ಎಂದಿದ್ದಾನೆ. ಇವನು ಸರಿಯಾಗಿ ಉತ್ತರವನ್ನು ನೀಡದೇ ಇದ್ದುದರಿಂದ ಅನುಮಾನಗೊಂಡು ಆತನಲ್ಲಿ ಈ ವಾಹನದ ಮೂಲ ದಾಖಲಾತಿಯನ್ನು ಕೇಳಿದಾಗ ಹಾಗೂ ಹೆಚ್ಚಿನ ವಿಚಾರಣೆ ಮಾಡಿದಾಗ ರಜಾಕನು ಎಂ ಡಿ ಎಂ ಎ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪದೇ ಪದೇ ಕೇಳಿ ವಿಚಾರಿಸಿದಾಗ ಇತನು ಸೇವನೆ ಮತ್ತು ಮಾರಾಟ ಮಾಡುವ ಸಲುವಾಗಿ ಎಂ.ಡಿ.ಎಂ.ಎ ಮಾಧಕ ದ್ರವ್ಯವನ್ನು ಕಾರಿನಲ್ಲಿ ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದು.


ಈ ಮಾದಕ ವಸ್ತು ಎಂ.ಡಿ.ಎಂ.ಎ ನು ಬೆಂಗಳೂರಿನ ಮೆಜೆಸ್ಟಿಕ್ ಬಳಿ ಯಾರೋ ಅಪರಿಚಿತ ವ್ಯಕ್ತಿಯಿಂದ ಎಂ.ಡಿ.ಎಂ.ಎ ನ್ನು ಪಡೆದುಕೊಂಡು ಉಪ್ಪಿನಂಗಡಿ, ಮಠ, ಹಿರೇಬಂಡಾಡಿ ಕಡೆಗಳಲ್ಲಿ ಗಿರಾಕಿಗಳನ್ನು ಹುಡುಕಿ ಅಕ್ರಮವಾಗಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಾರಾಟ ಮಾಡಲೆಂದು ಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ.ಕೊನೆಗೆ ಪರಿಶೀಲಿಸಿದಾಗ ಒಂದು ಪ್ಲಾಸ್ಟಿಕ್ ಕವರಿನಲ್ಲಿದ್ದ 12.35 ಗ್ರಾಂ ತೂಕದ 20.000 ರೂ ಮೌಲ್ಯ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಅದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ 10 ಸಾವಿರ ರೂಪಾಯಿ ಮೌಲ್ಯದ ಒಂದು ಮೊಬೈಲ್, 3 ಲಕ್ಷ ಮೌಲ್ಯದ ಟೊಯೊಟಾ ಕಂಪೆನಿಯ ಕ್ಯಾಂಬ್ರಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
