ಮಂಗಳೂರು : ರಾಮಕುಂಜ ಗ್ರಾಮದಲ್ಲಿ ಜನವರಿ 24 ರಂದು ಗುಂಡೇಟಿನಿಂದ ಬಾಲಕ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವೈದ್ಯಕೀಯ ವರದಿಯಲ್ಲಿ ಸ್ಪೋಟಕ ಮಾಹಿತಿ ಸಿಕ್ಕಿದ್ದು, ಬಾಲಕ ಆತ್ಮಹತ್ಯೆಗೆ ಮುನ್ನ ತಂದೆಗೆ ಶೂಟ್ ಮಾಡಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.


ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಹಾಗೂ ಜಯಶ್ರೀ ದಂಪತಿ ಪುತ್ರ ಮೋಕ್ಷ್ (17) ಪಾದೆ ಮನೆಯಲ್ಲಿ ಗುಂಡೇಟಿನಿಂದ ಮೃತಪಟ್ಟಿದ್ದರು. ಮೋಕ್ಷ್ ತಂದೆಗೆ ಇರಿದು ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ಆರಂಭದಲ್ಲಿ ಮಾಹಿತಿ ಹರಿದಾಡಿತ್ತು. ಆದರೆ ಇದೀಗ ವೈದ್ಯಕೀಯ ಪರೀಕ್ಷೆಯಲ್ಲಿ ಮೋಕ್ಷ್ ತಂದೆ ವಸಂತ್ ಅಮೀನ್ ಗೆ ಗುಂಡೇಟು ತಗುಲಿದ್ದು ದೃಢಪಟ್ಟಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಈ ಘಟನೆ ಮೊದಲು ಬೆಳಕಿಗೆ ಬಂದಾಗ, ಕೌಟುಂಬಿಕ ಕಲಹದ ಕಾರಣದಿಂದಾಗಿ ಮೋಕ್ಷ ತನ್ನ ತಂದೆಯ ಹೊಟ್ಟೆಗೆ ಚಾಕುವಿನಿಂದ ಇರಿದು ನಂತರ ತನ್ನ ತಂದೆಯ ಪರವಾನಗಿ ಪಡೆದ SBBL ಬಂದೂಕನ್ನು ತಾನೇ ತಿರುಗಿಸಿಕೊಂಡಿದ್ದಾನೆ ಎಂದು ವರದಿಯಾಗಿತ್ತು. ವಸಂತ್ ಅಮೀನ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ವಿವರವಾದ ವೈದ್ಯಕೀಯ ಪರೀಕ್ಷೆಗಳು ವಸಂತ್ ಅಮೀನ್ ಅವರ ಹೊಟ್ಟೆಯ ಮೇಲಿನ ಗಾಯವು ಬಂದೂಕಿನ ಗುಂಡಿನಿಂದ ಉಂಟಾಗಿದೆಯೇ ಹೊರತು ಚಾಕುವಿನಿಂದಲ್ಲ ಎಂದು ದೃಢಪಡಿಸಿವೆ.
ವಸಂತ್ ಅಮೀನ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು FSL Bengaluru ಇವರಿಂದ ವರದಿ ಬರಲು ಬಾಕಿ ಇದ್ದು, ವರದಿ ಬಂದ ನಂತರ ಪ್ರಕರಣವನ್ನು ಅಂತಿಮಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮಗ ಮೋಕ್ಷ್‌ನನ್ನು ತಂದೆ ವಸಂತ ಅವರೇ ಕೊಲೆ ಮಾಡಿರುವುದಾಗಿ ತಾಯಿ ಜಯಶ್ರೀ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಹೊರಬಿದ್ದಿದ್ದು, ಎಫ್ಎಸ್ಎಲ್ ವರದಿ ಬಂದ ಬಳಿಕವೇ ಈ ಪ್ರಕರಣಕ್ಕೆ ಪ್ರಮುಖ ಕಾರಣ ಎನೆಂದು ತಿಳಿದು ಬರಲಿದೆ.

