ಪೊಲೀಸ್, ಗಾಂಜಾ, ಐಫೋನ್ ಕಥೆ ಕಟ್ಟಿ ರೂ. 3,500 ಎಗರಿಸಿ ಖದೀಮ ಪರಾರಿ: ಕುಂಬ್ರದಲ್ಲಿ ಮುಗ್ಧ ಯುವತಿಗೆ ಸಿನೆಮಾ ಶೈಲಿಯಲ್ಲಿ ಖೆಡ್ಡಾ..!

Prakhara News
3 Min Read

ಪುತ್ತೂರು: ‘ನಾವು ಪೊಲೀಸ್, ಗಾಂಜಾ ಹಿಡಿಯೋಕೆ ಬಂದಿದ್ದೀವಿ, ಐಫೋನ್ ಸಿಗುತ್ತೆ…’ ಎಂದೆಲ್ಲ ನಂಬಿಸಿ, ಒಡ್ಡಿದ ಬಲೆಯೊಳಗೆ ಅಂಗಡಿ ಕೆಲಸದಾಕೆಯನ್ನು ಕೆಡವಿ, ಭರ್ಜರಿ ರೂ. 3,500 ನಗದು ಪೀಕಿ ವಂಚಕನೊಬ್ಬ ಪರಾರಿಯಾದ ಸ್ವಾರಸ್ಯಕರ ಹಾಗೂ ಖದೀಮ ಘಟನೆ ಆ. 30ರ ರವಿವಾರ ಬೆಳಿಗ್ಗೆ ಕುಂಬ್ರದ ಜ್ಯೂಸ್ ಮತ್ತು ಚಾಟ್ಸ್ ಅಂಗಡಿಯೊಂದರಲ್ಲಿ ನಡೆದಿದೆ.

ಖದೀಮ ಹೇಳಿದ ‘ಖಾಕಿ’ ಕಥೆ! ರವಿವಾರ ಬೆಳಿಗ್ಗೆ ವಾಹನದಲ್ಲಿ ಜ್ಯೂಸ್ ಅಂಗಡಿಗೆ ಎಂಟ್ರಿ ಕೊಟ್ಟ ಅನಾಮಧೇಯ ವ್ಯಕ್ತಿ, ತಾನು ಪೊಲೀಸ್ ಇಲಾಖೆಯವನೆಂದು ಅಂಗಡಿಯಲ್ಲಿದ್ದ ಯುವತಿಗೆ ಪರಿಚಯಿಸಿಕೊಂಡಿದ್ದಾನೆ. “ಕುಂಬ್ರ ಕಟ್ಟೆಯ ಹತ್ತಿರ ನಮ್ಮ ಪೊಲೀಸ್ ಜೀಪು ನಿಂತಿದೆ. ನಾವಿಲ್ಲಿ ಗಾಂಜಾ ದಂಧೆಕೋರರನ್ನು ಹಿಡಿಯಲು ಬಂದಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಗಾಂಜಾ ಸಿಕ್ಕರೆ ನಮಗೆ ಭಾರಿ ಹಣ ಮತ್ತು ಆಕರ್ಷಕ ಐಫೋನ್ ಮೊಬೈಲ್‌ಗಳು ಸಿಗುತ್ತವೆ” ಎಂದು ಸಿನೆಮಾ ಶೈಲಿಯಲ್ಲಿ ಕಥೆ ಹೇಳಿದ್ದಾನೆ. ಪರಿಚಿತನಂತೆ ನಟಿಸಿ ಆಮಿಷ! ಇಷ್ಟಕ್ಕೇ ನಿಲ್ಲಿಸದ ಆಸಾಮಿ, ಯುವತಿಯ ಮನೆ ಎಲ್ಲಿದೆ ಎಂದು ವಿಚಾರಿಸಿದ್ದಾನೆ.

ಆಕೆ ತನ್ನ ಊರು-ಮನೆಯ ವಿಳಾಸ ಹೇಳುತ್ತಿದ್ದಂತೆ, “ಓಹ್ ಹೌದಾ! ನಿನ್ನ ಅಪ್ಪ, ಬಾವ ಎಲ್ಲ ನನಗೆ ಚೆನ್ನಾಗಿ ಗೊತ್ತು!” ಎಂದು ಪರಿಚಿತನಂತೆ ನಟಿಸಿ ನಂಬಿಕೆ ಗಿಟ್ಟಿಸಿಕೊಂಡಿದ್ದಾನೆ. ಬಳಿಕ ಯುವತಿಯ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು, “ನಮ್ಮ ಹತ್ತಿರ ವಶಪಡಿಸಿಕೊಂಡ ಐಫೋನ್ ಇದೆ, ನಿನಗೂ ಒಂದು ಐಫೋನ್ ಬೇಕಾ?” ಎಂದು ಆಮಿಷ ಒಡ್ಡಿದ್ದಾನೆ. ‘ಗೂಗಲ್ ಪೇ ಬೇಡ, ಕ್ಯಾಶ್ ಬೇಕು!’ ಸಾಲದ್ದಕ್ಕೆ, ಮಾತುಕತೆಯ ನಡುವೆಯೇ ಯುವತಿಯ ಬಳಿ, “ನನಗೆ ತುರ್ತಾಗಿ ರೂ. 3,500 ಹಣ ಬೇಕು, ತಕ್ಷಣ ಕೊಡ್ತೀಯಾ?” ಎಂದು ಕೇಳಿದ್ದಾನೆ. ಆಕೆ “ಗೂಗಲ್ ಪೇ ಮಾಡಲಾ?” ಎಂದಾಗ, ಚಾಲಾಕಿ ವಂಚಕ “ಇಲ್ಲ ಇಲ್ಲ, ನನಗೆ ನಗದಾಗಿಯೇ ಬೇಕು” ಎಂದಿದ್ದಾನೆ. ಆತನ ಮಾತುಗಳನ್ನು ಸತ್ಯವೆಂದು ನಂಬಿದ ಯುವತಿ, ತಡಮಾಡದೇ ರೂ. 3,500 ನಗದನ್ನು ಆತನ ಕೈಗಿಟ್ಟಿದ್ದಾಳೆ.

ಹಣ ಕೈಸೇರುತ್ತಿದ್ದಂತೆ “ಈಗಲೇ ಜೀಪ್ ಹತ್ತಿರ ಹೋಗಿ ಬರ್ತೇನೆ” ಎಂದು ಹೇಳಿದ ಆ ಖದೀಮ ಅಲ್ಲಿಂದ ಬೈಕ್ ಏರಿ ಪರಾರಿಯಾಗಿದ್ದಾನೆ. ಕಾಯ್ತು ಕಾಯ್ತು ಸಾಕಾದ ಯುವತಿ: ಹಣ ಪಡೆದು ಹೋದ ‘ಪೊಲೀಸ್’ ಎಷ್ಟೊ ಹೊತ್ತಾದರೂ ಹಿಂತಿರುಗದಿದ್ದಾಗ ಅನುಮಾನಗೊಂಡ ಯುವತಿ, ಕುಂಬ್ರ ಕಟ್ಟೆಯ ಬಳಿ ಹೋಗಿ ನೋಡಿದಾಗ ಅಸಲಿ ಕಥೆ ಬೆಳಕಿಗೆ ಬಂದಿದೆ! ಅಲ್ಲಿ ಪೊಲೀಸ್ ಜೀಪೂ ಇರಲಿಲ್ಲ, ಆ ವ್ಯಕ್ತಿಯೂ ಇರಲಿಲ್ಲ. ತಾನು ಕಥೆ ನಂಬಿ ಸಂಪೂರ್ಣವಾಗಿ ಮೋಸ ಹೋಗಿರುವುದನ್ನು ಅರಿತ ಯುವತಿ ಹಣ ಕಳೆದುಕೊಂಡು ಕುಳಿತುಕೊಳ್ಳುವಂತಾಗಿದೆ. ಖಾಕಿ ಹೆಸರು ಹೇಳಿ ಮುಗ್ಧ ಯುವತಿಗೆ ನಾಮ ಹಾಕಿದ ಈ ಚಾಲಾಕಿ ವಂಚಕನ ಪತ್ತೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸಾರ್ವಜನಿಕ ಜಾಗೃತಿಗಾಗಿ ಪ್ರಮುಖ ಕಿವಿಮಾತುಗಳು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಮುಗ್ಧತೆ ಹಾಗೂ ಭೀತಿಯನ್ನೇ ಬಂಡವಾಳ ಮಾಡಿಕೊಂಡು ವಂಚಿಸುವ ಜಾಲಗಳು ಹೆಚ್ಚಾಗುತ್ತಿವೆ. ಇಂತಹ ಆಮಿಷ ಮತ್ತು ನಕಲಿ ಅಧಿಕಾರಿಗಳ ವಂಚನೆಯಿಂದ ಪಾರಾಗಲು ಈ ಕೆಳಗಿನ ಜಾಗರೂಕತೆ ವಹಿಸುವುದು ಅತ್ಯಗತ್ಯ

ಅಧಿಕಾರಿಗಳೆಂದು ಹೇಳಿಕೊಳ್ಳುವವರ ಗುರುತಿನ ಚೀಟಿ ಪರಿಶೀಲಿಸಿ: ಯಾವುದೇ ವ್ಯಕ್ತಿ ತಾನು ಪೊಲೀಸ್, ಇನ್‌ಕಮ್ ಟ್ಯಾಕ್ಸ್ ಅಥವಾ ಇತರ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡರೆ ತಕ್ಷಣಕ್ಕೆ ನಂಬಬೇಡಿ. ಅವರ ಅಧಿಕೃತ ಗುರುತಿನ ಚೀಟಿಯನ್ನು (ID Card) ಕೇಳಿ ಪರಿಶೀಲಿಸಿ. ಆಮಿಷಗಳಿಗೆ ಮರುಳಾಗದಿರಿ: ಜಪ್ತಿ ಮಾಡಿದ ವಸ್ತುಗಳು, ಉಚಿತ ಫೋನ್‌ಗಳು ಅಥವಾ ಅಗ್ಗದ ದರದಲ್ಲಿ ಐಫೋನ್ ಕೊಡಿಸುವುದಾಗಿ ಯಾರಾದರೂ ಆಸೆ ತೋರಿಸಿದರೆ ಅದು ಖಂಡಿತ ಮೋಸದ ಜಾಲವಾಗಿರುತ್ತದೆ. ಸರ್ಕಾರಿ ಇಲಾಖೆಗಳು ಜಪ್ತಿ ಮಾಡಿದ ವಸ್ತುಗಳನ್ನು ಹೀಗೆ ವೈಯಕ್ತಿಕವಾಗಿ ಹಂಚುವುದಿಲ್ಲ. ವಂಚಕರು ಮಾತುಕತೆಯ ನಡುವೆಯೇ ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆದು, “ನಿಮ್ಮ ಅಪ್ಪ/ಬಂಧುಗಳು ಗೊತ್ತು” ಎಂದು ನಾಟಕವಾಡುತ್ತಾರೆ. ಅಪರಿಚಿತರಿಗೆ ನಿಮ್ಮ ಕುಟುಂಬ ಹಾಗೂ ಮನೆ ವಿಳಾಸದ ವಿವರಗಳನ್ನು ಸುಲಭವಾಗಿ ಹಂಚಿಕೊಳ್ಳಬೇಡಿ.

ನಗದು ವರ್ಗಾವಣೆಗೆ ಆತುರಪಡಬೇಡಿ: ತುರ್ತು ಅಗತ್ಯವಿದೆ ಎಂದು ಅಪರಿಚಿತರು ಹಣ ಕೇಳಿದರೆ ತಕ್ಷಣಕ್ಕೆ ನೀಡಬೇಡಿ. ನಿಮ್ಮ ಜಾಗದ ಮಾಲೀಕರು ಅಥವಾ ಹಿರಿಯರ ಗಮನಕ್ಕೆ ತಂದು ದೃಢಪಡಿಸಿಕೊಳ್ಳಿ. ಸಂದೇಹ ಬಂದಲ್ಲಿ ತಕ್ಷಣ 112 ಗೆ ಕರೆ ಮಾಡಿ: ಯಾವುದೇ ವ್ಯಕ್ತಿಯ ನಡವಳಿಕೆ ಶಂಕಾಸ್ಪದವಾಗಿ ಕಂಡುಬಂದರೆ ಅಥವಾ ಬೆದರಿಕೆ ಹಾಕಿದರೆ ತಕ್ಷಣವೇ ಉಚಿತ ಪೊಲೀಸ್ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿ

Share This Article
Leave a Comment