ಮೈಸೂರು: ಸ್ಯಾಂಡಲ್‌ವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಹಾಗೂ ಸಂಕಲನಕಾರ ನರಹಳ್ಳಿ ಜ್ಞಾನೇಶ್ (48) ಅವರು ಶುಕ್ರವಾರ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ.


ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನವರಾದ ನರಹಳ್ಳಿ ಜ್ಞಾನೇಶ್ ಕೆಲಸದ ನಿಮಿತ್ತ ಸ್ವಗ್ರಾಮ ನರಹಳ್ಳಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಗುರುವಾರ ಅವರಿಗೆ ತೀವ್ರ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಜ್ಞಾನೇಶ್ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ನರಹಳ್ಳಿ ಗ್ರಾಮದಲ್ಲಿ ನೆರವೇರಿದೆ.

ಜ್ಞಾನೇಶ್ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಹೋಬಳಿಯ ನರಹಳ್ಳಿ ಗ್ರಾಮದ ಬಿ. ಬೋರೇಗೌಡ ಮತ್ತು ಮರಿಲಿಂಗಮ್ಮ ಪುತ್ರ. ಕಳೆದ ಎರಡು ದಶಕಗಳಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದ ಜ್ಞಾನೇಶ್ ಅವರು, ಹಿರಿಯ ಸಂಕಲನಕಾರ ಸುರೇಶ್ ಅರಸ್ ಅವರ ಗರಡಿಯಲ್ಲಿ ಪಳಗಿದ್ದರು.

ತಮ್ಮ ವೃತ್ತಿಜೀವನದಲ್ಲಿ ಹಲವಾರು ಧಾರಾವಾಹಿಗಳು, ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಹಾಗೂ ಸಿನಿಮಾಗಳಿಗೆ ಸಂಕಲನಕಾರರಾಗಿ ಸೇವೆ ಸಲ್ಲಿಸಿದ್ದರು.ಇತ್ತೀಚೆಗಷ್ಟೇ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿದ್ದ ಇವರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳನ್ನು ಪ್ರತಿನಿಧಿಸುವ ಮೂಲಕ ವಾಣಿಜ್ಯ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದರು.



