ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತದ ಗಂಭೀರತೆ ಬಗ್ಗೆ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ. ಚೌಟ

Prakhara News
2 Min Read

ನವದೆಹಲಿ: ಉಳ್ಳಾಲ-ಸೋಮೇಶ್ವರ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗುತ್ತಿರುವ ಕಡಲ್ಕೊರೆತ ಸಮಸ್ಯೆಯನ್ನು ಗಂಭೀರವಾಗಿ ಕರಾವಳಿ ತೀರದ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಲೋಕಸಭೆಯಲ್ಲಿ ಧ್ವನಿಯೆತ್ತಿದ್ದಾರೆ.

ನಿಯಮ 377ರಡಿ ಇಂದು ಈ ಗಂಭೀರ ವಿಷಯ ಪ್ರಸ್ತಾಪಿಸಿರುವ ಸಂಸದರು, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 36.66 ಕಿ.ಮೀ ಕರಾವಳಿ ತೀರದ ಪೈಕಿ ಸುಮಾರು 17.74 ಕಿ.ಮೀ ಅಂದರೆ ಶೇ.48.40ರಷ್ಟು ಭಾಗವು ಕೊರೆತಕ್ಕೆ ಒಳಗಾಗುತ್ತಿದೆ. ಇದು ಕರ್ನಾಟಕ ರಾಜ್ಯದ ಸರಾಸರಿ ಶೇ. 24ರಷ್ಟು ಮತ್ತು ರಾಷ್ಟ್ರೀಯ ಸರಾಸರಿಗಿಂತ ಅಂದರೆ ಶೇ.33.6ಕ್ಕಿಂತಲೂ ಗಣನೀಯವಾಗಿ ಜಾಸ್ತಿಯಿದೆ. ಹೀಗಿರುವಾಗ, ಜಿಲ್ಲೆಯ ಕೇವಲ ಶೇ.21.9 ರಷ್ಟು ಕರಾವಳಿ ಮಾತ್ರ ಸದ್ಯಕ್ಕೆ ಸುರಕ್ಷಿತವಾಗಿದ್ದು, ಇದು ನೆರೆಯ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನಿರಂತರವಾಗಿ ಮುಂಗಾರಿನಲ್ಲಿ ಉಂಟಾಗುವ ಅಲೆಗಳ ಅಬ್ಬರ, ಬದಲಾಗುತ್ತಿರುವ ಹವಾಮಾನ ವೈಪರೀತ್ಯ ಮತ್ತು ಕರಾವಳಿಯಲ್ಲಿನ ಕೆಲವು ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಕಡಲ ತೀರವು ಸವಕಳಿಗೆ ಒಳಗಾಗಿ ಭೂಪ್ರದೇಶವು ಸಮುದ್ರಪಾಲಾಗುತ್ತಿದೆ. ಇದರಿಂದಾಗಿ ಕರಾವಳಿ ತೀರ ಭಾಗದ ಮನೆಗಳು, ರಸ್ತೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹೆಚ್ಚಿನ ಹಾನಿಯಾಗುತ್ತಿದೆ. ಹೀಗಾಗಿ, ಇದು ಕೇವಲ ಭೌಗೋಳಿಕ ಸಮಸ್ಯೆಯಲ್ಲ; ಬದಲಾಗಿ ಸಮುದ್ರವನ್ನೇ ನಂಬಿ ಬದುಕುತ್ತಿರುವ ಮೀನುಗಾರ ಸಮುದಾಯದ ಜೀವನೋಪಾಯಕ್ಕೆ ಉಂಟಾಗುತ್ತಿರುವ ದೊಡ್ಡ ಅಪಾಯವಾಗಿದೆ ಎಂದು ಕ್ಯಾ. ಚೌಟ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡದ ಕರಾವಳಿ ತೀರವು ಪ್ರತಿ ವರ್ಷವೂ ತೀವ್ರ ಸ್ವರೂಪದ ಕಡಲ್ಕೊರೆತಕ್ಕೆ ಒಳಗಾಗುತ್ತಿರಬೇಕಾದರೆ ಮತ್ತೆ ಮುಂಗಾರು ಮಳೆ ಪ್ರವೇಶ ಸಮೀಪಿಸುತ್ತಿದೆ. ಈ ಹಿನ್ನಲೆಯಲ್ಲಿ ತುರ್ತಾಗಿ ಮಳೆಯ ಅಬ್ಬರಕ್ಕೂ ಮೊದಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ. ಅದರಂತೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ಭೂ ವಿಜ್ಞಾನ ಸಚಿವಾಲಯಗಳ ಪರಸ್ಪರ ಸಮನ್ವಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷವಾದ ಕರಾವಳಿ ಸಂರಕ್ಷಣಾ ಯೋಜನೆಯನ್ನು ರೂಪಿಸಬೇಕು. ಜತೆಗೆ, ಕರಾವಳಿ ಸಂರಕ್ಷಣೆಗೆ ತುರ್ತಾಗಿ ಕೈಗೊಳ್ಳಬೇಕಾದ ಮೀಸಲಾಗಿರುವ ಹಣಕಾಸಿನ ನೆರವನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಆ ಮೂಲಕ ಕರಾವಳಿ ತೀರದ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕೈಗೊಳ್ಳುವ ಮೂಲಕ ಮೀನುಗಾರರ ಬದುಕನ್ನು ಸುರಕ್ಷಿತಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಪರಿಹಾರಕ್ಕೆ ಕಾರ್ಯೋನ್ಮುಖವಾಗಬೇಕೆಂದು ಕ್ಯಾ. ಚೌಟ ಅವರು ಸದನದಲ್ಲಿ ಆಗ್ರಹಿಸಿದ್ದಾರೆ.

Share This Article
Leave a Comment