ಪುತ್ತೂರು : ಪುತ್ತೂರಿನ ಪುರುಷರಕಟ್ಟೆಯಲ್ಲಿ ನಡೆದ ಚೂರಿ ತೋರಿಸಿ ಬೆದರಿಕೆ ಒಡ್ಡಿದ ಪ್ರಕರಣದ ಸಂತ್ರಸ್ತ ಯುವತಿಯ ಮನೆಗೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನೇತೃತ್ವದ ಉನ್ನತ ಮಟ್ಟದ ಬಿಜೆಪಿ ನಿಯೋಗ ಭೇಟಿ ನೀಡಿ, ಯುವತಿ ಮತ್ತು ಆಕೆಯ ಪೋಷಕರಿಗೆ ಧೈರ್ಯ ತುಂಬಿದೆ. ಸಂತ್ರಸ್ತ ಕುಟುಂಬಕ್ಕೆ ಪಕ್ಷವು ನಿರಂತರವಾಗಿ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದ ನಿಯೋಗವು, ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.


ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ಪಕ್ಷಪಾತಿ ಧೋರಣೆಯನ್ನು ಕಠಿಣ ಪದಗಳಲ್ಲಿ ಖಂಡಿಸಿದರು. “ಸಂತ್ರಸ್ತ ಯುವತಿಯು ತನ್ನ ಜೊತೆಗೆ ಚೇಷ್ಟೆ ಮಾಡಲಾಗಿದೆ ಮತ್ತು ಸಾರ್ವಜನಿಕವಾಗಿ ಚೂರಿ ತೋರಿಸಿ ಜೀವಬೆದರಿಕೆ ಒಡ್ಡಲಾಗಿದೆ ಎಂದು ಅತ್ಯಂತ ಸ್ಪಷ್ಟವಾಗಿ ದೂರಿನಲ್ಲಿ ದಾಖಲಿಸಿದ್ದಾಳೆ. ಆಕೆಯ ದೂರಿನಲ್ಲಿ ಎಲ್ಲೂ ಕೋಮುಭಾವನೆ ಕೆರಳಿಸುವ ಅಥವಾ ಪ್ರಚೋದಿಸುವ ಯಾವುದೇ ವಿಚಾರಗಳನ್ನು ಉಲ್ಲೇಖಿಸಿಲ್ಲ. ಪರಿಸ್ಥಿತಿ ಹೀಗಿದ್ದರೂ, ಸ್ವತಃ ನೊಂದ ಯುವತಿ ಹಾಗೂ ಆಕೆಗೆ ಧೈರ್ಯ ತುಂಬಿ ದೂರು ದಾಖಲಿಸಲು ಠಾಣೆಗೆ ಕರೆದೊಯ್ದ ಆಕೆಯ ಪೋಷಕರ ವಿರುದ್ಧವೇ ಪೊಲೀಸರು ಉಲ್ಟಾ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೊಲೀಸ್ ಇಲಾಖೆ ಎಸಗಿದ ಭಾರಿ ಅನ್ಯಾಯ ಮತ್ತು ದ್ರೋಹವಾಗಿದೆ” ಎಂದು ಸಂಸದರು ಗುಡುಗಿದರು.

ಒಂದು ಹೆಣ್ಣುಮಗಳಿಗೆ ಕರಾವಳಿಯ ಮಣ್ಣಿನಲ್ಲಿ ರಕ್ಷಣೆ ಮತ್ತು ನ್ಯಾಯ ಕೊಡಲು ಸಂಪೂರ್ಣವಾಗಿ ವಿಫಲವಾಗಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಬಿಜೆಪಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ ಎಂದು ನಿಯೋಗ ಎಚ್ಚರಿಸಿದೆ.




