ಮಂಗಳೂರು: ದರೋಡೆ, ಸುಲಿಗೆ, ಅತ್ಯಾಚಾರ, ಕೋಮು ಹತ್ಯೆ ಮುಂತಾದ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಗದೇ ಇದ್ದಲ್ಲಿ ಅವರಿಗೆ ಜಾಮೀನು ನೀಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.


ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸುಮಾರು 15 ರೌಡಿಗಳನ್ನು ಬಂಧಿಸಿದ್ದು ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಆರಂಭಿಸಲಾಗಿದೆ. ಪೊಲೀಸರ ಕೈಗೆ ಸಿಗದೇ ಇರುವ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಜಾಮೀನು ನೀಡಿದವರ ಕಂದಾಯ ದಾಖಲೆಗಳನ್ನು ನ್ಯಾಯಾಲಯದ ಆಸ್ತಿಯೆಂದು ಘೋಷಿಸಲಾಗುವುದು. ಈಗಾಗಲೇ ಓರ್ವ ಆರೋಪಿಯ ಮನೆಯನ್ನು ನ್ಯಾಯಾಲಯದಿಂದ ಹರಾಜು ಮಾಡಲಾಗಿದೆ. ಜಾಮೀನು ನೀಡಿದವರ ಮೇಲೆ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಜಾಮೀನು ನೀಡಿದ 11 ಮಂದಿಗೆ 10 ಸಾವಿರದಿಂದ 2 ಲಕ್ಷ ರೂ. ವರೆಗೆ ದಂಡ ಹಾಕಲಾಗಿದೆ. 17 ಮಂದಿ ಜಾಮೀನುದಾರರ ಆಸ್ತಿಯ ಆರ್ ಟಿಸಿಯಲ್ಲಿ ‘ನ್ಯಾಯಾಲಯದ ಆಸ್ತಿ’ ಎಂದು ನಮೂದಿಸಲಾಗಿದೆ. ಇದನ್ನೂ ಓದಿ: ಅತ್ತ ಕೋವಿ ಗುಂಡು ತಗುಲಿದ ಸ್ಥಿತಿಯಲ್ಲಿ ಮಗನ ಮೃತದೇಹ ಪತ್ತೆ…ಇತ್ತ ಚೂರಿ ಇರಿತಕ್ಕೊಳಗಾಗಿ ತಂದೆ ಆಸ್ಪತ್ರೆಗೆ….ಏನಿದು ಕೇಸ್!? ಹೀಗಾಗಿ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವವರು ಎಚ್ಚರಿಕೆ ವಹಿಸಬೇಕು. ಅಂತಹ ಆರೋಪಿಗಳ ನ್ಯಾಯಾಲಯಕ್ಕೆ ಹಾಜರುಪಡಿಸುವ ಜವಾಬ್ದಾರಿ ಜಾಮೀನುದಾರರು ವಹಿಸಿಕೊಳ್ಳಬೇಕು ಎಂದು ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

