‘ಸ್ಟೇಟ್‌ಬ್ಯಾಂಕ್’ನ ಮೀನುಗಾರರ ಸಮಸ್ಯೆಗಳಿಗೆ ಕಿವಿಯಾದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ

Prakhara News
2 Min Read

ಮಂಗಳೂರು : ಮಂಗಳೂರಿನ ಕೇಂದ್ರ ಭಾಗವಾದ ಸ್ಟೇಟ್ ಬ್ಯಾಂಕ್ ಪರಿಸರದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ಮಹಿಳೆಯರ ಬದುಕು ದುಸ್ತರವಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಗುರುವಾರ ಮಧ್ಯಾಹ್ನ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಹಸಿ ಹಾಗೂ ಒಣಮೀನು ಮಾರುಕಟ್ಟೆಯ ಪ್ರತಿ ಮೂಲೆಗೂ ಭೇಟಿ ನೀಡಿದ ಅವರು, ಅಲ್ಲಿನ ಅವ್ಯವಸ್ಥೆಗಳನ್ನು ಕಣ್ಣಾರೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ದಶಕಗಳಿಂದ ಮೀನು ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿರುವ ನೂರಾರು ಮಹಿಳೆಯರು ತಮ್ಮ ಸಮಸ್ಯೆಗಳನ್ನು ಅವರ ಮುಂದೆ ಹಂಚಿಕೊಂಡರು.

ಪರಿಶೀಲನೆಯ ಬಳಿಕ ಮಾತನಾಡಿದ ಡಾ. ನಾಗಲಕ್ಷ್ಮಿ ಚೌಧರಿ , ಮಾರುಕಟ್ಟೆಯಲ್ಲಿ ಸಮರ್ಪಕ ನೈರ್ಮಲ್ಯದ ಕೊರತೆಯಿಂದ ದುರ್ವಾಸನೆ ವ್ಯಾಪಿಸಿದ್ದು, ದಿನವಿಡೀ ಕೆಲಸ ಮಾಡುವ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದರು.

ಮಾರುಕಟ್ಟೆ ಸ್ವಚ್ಛತೆಗೆ ಅಗತ್ಯವಾದ ನೀರಿನ ಸೌಲಭ್ಯವಿಲ್ಲದೆ ಇರುವುದೂ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ವ್ಯಾಪಾರಕ್ಕೆ ತಕ್ಕಷ್ಟು ಸ್ಥಳಾವಕಾಶದ ಕೊರತೆ ಹಾಗೂ ಭದ್ರತಾ ವ್ಯವಸ್ಥೆಯ ಅಭಾವದಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಮಹಿಳೆಯರು ದೂರಿದರು.

ಸರ್ಕಾರ ನಿರ್ಮಿಸಿರುವ ನೂತನ ಮಾರುಕಟ್ಟೆಗೆ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, “ನೂತನ ಮಾರುಕಟ್ಟೆಗೆ ತೆರಳಲು ಮಹಿಳೆಯರಿಗೆ ಸಿದ್ಧತೆ ಇದ್ದರೂ, ಆ ಕಟ್ಟಡವನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ ಎನ್ನುವುದು ಅವರ ಆಕ್ಷೇಪವಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸದೇ ‘ಹೊಸ ಮಾರುಕಟ್ಟೆ ನಿರ್ಮಿಸಲಾಗಿದೆ’ ಎನ್ನುವುದು ಅಧಿಕಾರಿಗಳ ಸಿದ್ದ ಉತ್ತರವಾಗಿದೆ. ವ್ಯಾಪಾರಕ್ಕೆ ಅನುಕೂಲಕರವಾದ ಬದಲಾವಣೆಗಳನ್ನು ಮಾಡಿಕೊಟ್ಟರೆ ಮಾತ್ರ ಸ್ಥಳಾಂತರಕ್ಕೆ ಸಮ್ಮತಿಸುವುದಾಗಿ ಮಹಿಳೆಯರು ಸ್ಪಷ್ಟಪಡಿಸಿದ್ದಾರೆ,” ಎಂದು ಹೇಳಿದರು.

ಹಳೆಯ ಮಾರುಕಟ್ಟೆ ಬಸ್ ನಿಲ್ದಾಣದ ಸಮೀಪದಲ್ಲಿರುವುದರಿಂದ ವ್ಯಾಪಾರ ಉತ್ತಮವಾಗುತ್ತದೆ ಎಂಬುದು ಮಹಿಳೆಯರ ಅಭಿಪ್ರಾಯವಾಗಿದೆ. ಆದರೆ ಬಸ್ ನಿಲ್ದಾಣ ವಿಸ್ತರಣೆಯ ಪ್ರಸ್ತಾವನೆಯೂ ಇರುವ ಹಿನ್ನೆಲೆ, ಎರಡೂ ಹಿತಾಸಕ್ತಿಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.

“ಈ ಎಲ್ಲ ವಿಚಾರಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಿದ್ದೇನೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನೂತನ ಮಾರುಕಟ್ಟೆಯಲ್ಲಿ ಅಗತ್ಯವಿರುವ ವೈಜ್ಞಾನಿಕ ಬದಲಾವಣೆಗಳನ್ನು ಮಾಡಿಸುವಂತೆ ಒತ್ತಾಯಿಸುತ್ತೇನೆ. ಮೀನು ಮಾರಾಟಗಾರ ಮಹಿಳೆಯರ ಹಿತಾಸಕ್ತಿ ಕಾಪಾಡುವುದು ನಮ್ಮ ಆದ್ಯತೆಯಾಗಿದೆ,” ಎಂದು ಡಾ. ನಾಗಲಕ್ಷ್ಮಿ ಚೌಧರಿ ಭರವಸೆ ನೀಡಿದರು.

Share This Article
Leave a Comment