ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು ಎರಡು ಪ್ರತ್ಯೇಕ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಹಾಗೂ ಸಾಗಾಟ ಮಾಡುತ್ತಿದ್ದ ಗೋವಾ ರಾಜ್ಯದ ಒಟ್ಟು 1,450.340 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.


2026ರ ನವೆಂಬರ್ 23ರಂದು ನಡೆದ ಈ ಕಾರ್ಯಾಚರಣೆಗಳಲ್ಲಿ ಜಪ್ತಿ ಮಾಡಲಾದ ಮದ್ಯ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ ₹20,37,340 ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಮೊದಲ ಪ್ರಕರಣ: ಬಾಳ್ತಿಲದಲ್ಲಿ ₹7.72 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತಿ

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಪೂರ್ಲಿಪಾಡಿ ಎಂಬಲ್ಲಿ ಅಮಿತ್ ಬಿನ್ ಅಣ್ಣು ಪೂಜಾರಿ ಅವರಿಗೆ ಸೇರಿದ ಜಾಗದಲ್ಲಿ ಸಂಪ್ರಿತ್ ಕಾಸರಗೋಡು ಎಂಬಾತನ ಸಹಭಾಗಿತ್ವದಲ್ಲಿ ಗೋವಾ ರಾಜ್ಯದಲ್ಲಿ ತಯಾರಿಸಲಾದ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು.
ಈ ಮಾಹಿತಿಯ ಮೇರೆಗೆ ಅಬಕಾರಿ ಜಂಟಿ ಆಯುಕ್ತರಾದ ಸಿ. ಜಗದೀಶ್ ಅವರ ನಿರ್ದೇಶನದಂತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ ಪಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಬಂಟ್ವಾಳ ಮತ್ತು ಮಂಗಳೂರು ಉಪ ವಿಭಾಗಗಳ ಅಬಕಾರಿ ಉಪ ಅಧೀಕ್ಷಕರಾದ ಸಂತೋಷ್ ಮೊಡಗಿ ಹಾಗೂ ಗಾಯತ್ರಿ ಸಿ.ಎಚ್. ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ನೇತೃತ್ವದ ತಂಡ ದಾಳಿ ನಡೆಸಿತು.
ಈ ವೇಳೆ 180 ಮಿಲಿ ಸಾಮರ್ಥ್ಯದ ರಾಯಲ್ ಬ್ಲೂ ಮಾಲ್ಟ್ ವಿಸ್ಕಿಯ 146 ಪೆಟ್ಟಿಗೆಗಳಲ್ಲಿ ಒಟ್ಟು 1,261.440 ಲೀಟರ್ ಗೋವಾ ಮದ್ಯ ಪತ್ತೆಯಾಗಿದ್ದು, ಅಂದಾಜು ₹7,72,340 ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಅಭಿಷೇಕ್ ಬೋರಕರ, ವಿಶಾಲ್ ನಾಯಕ್, ಅಬಕಾರಿ ಪೇದೆಗಳಾದ ಪ್ರಕಾಶ್, ದೊಡ್ಡಪ್ಪ ಹಾಗೂ ವಾಹನ ಚಾಲಕ ಧೀರಜ್ ಪಾಲ್ಗೊಂಡಿದ್ದರು.

ಎರಡನೇ ಪ್ರಕರಣ: ಎರಡು ಕಾರುಗಳಲ್ಲಿ 188.9 ಲೀಟರ್ ಗೋವಾ ಮದ್ಯ ಅಕ್ರಮ ಸಾಗಾಟ ಬಂಟ್ವಾಳ ತಾಲೂಕಿನ ಮೆಲ್ಕಾರ್ ಪ್ರದೇಶದ ಕಲ್ಲಡ್ಕ ಸಮೀಪ ಕೇರಳ ರಾಜ್ಯದ ನೋಂದಣಿ ಹೊಂದಿರುವ ಎರಡು ಕಾರುಗಳಲ್ಲಿ ಯಾವುದೇ ಪರವಾನಗಿ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಗೋವಾ ರಾಜ್ಯದ ಮದ್ಯವನ್ನು ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಬಕಾರಿ ಅಧಿಕಾರಿಗಳಿಗೆ ಲಭಿಸಿತ್ತು.
ಈ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಎರಡು ಕಾರುಗಳನ್ನು ತಡೆದು ಪರಿಶೀಲಿಸಿದಾಗ, ಕೇರಳ ನೋಂದಣಿಯ ಬಿಳಿ ಮತ್ತು ಕಪ್ಪು ಬಣ್ಣದ ಹುಂಡೈ i20 ಕಾರು (KL-56-R-2927) ಹಾಗೂ ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ VDI ಕಾರು (KL-14-H-7061)ಗಳಲ್ಲಿ ಮದ್ಯ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಆರೋಪಿಗಳಾದ ಚಂದ್ರಶೇಖರ್ (ಅನ್ನು), ಸಫ್ವಾನ್ ಎಂ. ಹಾಗೂ ಮಹಮ್ಮದ್ ಶಾಫಿನ್ ಅವರು 24 ಪೆಟ್ಟಿಗೆಗಳಲ್ಲಿ 180 ಮಿಲಿ ಸಾಮರ್ಥ್ಯದ ರಾಯಲ್ ಬ್ಲೂ ಮದ್ಯವನ್ನು, ಒಟ್ಟು 188.9 ಲೀಟರ್ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಎರಡೂ ಕಾರ್ಯಾಚರಣೆಗಳಲ್ಲಿ ಒಟ್ಟು 1,450.340 ಲೀಟರ್ ಗೋವಾ ಮದ್ಯವನ್ನು ಜಪ್ತಿ ಮಾಡಲಾಗಿದ್ದು, ಮದ್ಯ ಹಾಗೂ ವಾಹನಗಳ ಅಂದಾಜು ಒಟ್ಟು ಮೌಲ್ಯ ₹20,37,340 ಆಗಿದೆ. ಪ್ರಕರಣಗಳ ಕುರಿತು ಅಬಕಾರಿ ಇಲಾಖೆ ಮುಂದಿನ ಕಾನೂನು ಕ್ರಮ ಕೈಗೊಂಡಿದೆ.


