ನಟ ಧನ್ವೀರ್ ವಿರುದ್ಧ ಕಾನೂನು ಕ್ರಮಕ್ಕೆ ದಕ್ಷಿಣ ಕನ್ನಡ ಎನ್‌ಎಸ್‌ಯುಐ ಆಗ್ರಹ..!

Prakhara News
1 Min Read

ಮಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನಲಾದ ನಟ ಧನ್ವೀರ್ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಅಧಿಕೃತ ದೂರು ಸಲ್ಲಿಸಿದೆ.

ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರ ನೇತೃತ್ವದಲ್ಲಿ ಪೊಲೀಸ್ ಆಯುಕ್ತರನ್ನು ಭೇಟಿಯಾದ ಸಮಿತಿಯ ಪದಾಧಿಕಾರಿಗಳು, ನಟ ಧನ್ವೀರ್ ಅವರ ಹೇಳಿಕೆಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ನೀತಿಗಳನ್ನು ಟೀಕಿಸುವ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವೈಯಕ್ತಿಕ ನಿಂದನೆ ಅಥವಾ ವ್ಯಕ್ತಿಗಳ ಗೌರವಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಟ ಧನ್ವೀರ್ ಅವರ ಹೇಳಿಕೆಗಳ ಹಿನ್ನೆಲೆ, ಸಂದರ್ಭ ಹಾಗೂ ಪರಿಣಾಮಗಳನ್ನು ಪರಿಶೀಲಿಸಬೇಕು. ಸಂಬಂಧಪಟ್ಟ ವಿಡಿಯೋ, ಆಡಿಯೋ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಬೇಕು. ಕಾನೂನು ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಅನ್ವಯಿಸುವ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎನ್‌ಎಸ್‌ಯುಐ ಮುಖಂಡರು ಒತ್ತಾಯಿಸಿದರು.

ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಪಾರದರ್ಶಕ ತನಿಖೆ ನಡೆಸಿ, ಸಾರ್ವಜನಿಕ ಜೀವನದಲ್ಲಿ ಗೌರವಯುತ ಭಾಷೆ ಮತ್ತು ಕಾನೂನಿನ ಮೇಲಿನ ವಿಶ್ವಾಸವನ್ನು ಕಾಪಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Share This Article
Leave a Comment