ಮಂಗಳೂರು : ಮುಂಬೈ ಪೊಲೀಸ್ ಮತ್ತು ‘ಡೇಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ’ದ ಅಧಿಕಾರಿಗಳೆಂದು ಹೇಳಿಕೊಂಡು 66 ವರ್ಷದ ಹಿರಿಯ ನಾಗರಿಕರೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಭೀತಿಯಲ್ಲಿರಿಸಿ ಭಾರಿ ಮೊತ್ತದ ಹಣ ವಂಚಿಸಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಅಪರಿಚಿತ ಸೈಬರ್ ಕಳ್ಳರ ಮಾತು ನಂಬಿದ ಸಂತ್ರಸ್ತ ವೃದ್ಧರು ಹಂತ ಹಂತವಾಗಿ ಬರೋಬ್ಬರಿ ₹34,48,094 (ರೂ. 34.48 ಲಕ್ಷ) ಹಣವನ್ನು ಕಳೆದುಕೊಂಡಿದ್ದಾರೆ.


ದಿನಾಂಕ 10-07-2026ರಂದು ಸಂಜೆ ಸುಮಾರು 3.00 ಗಂಟೆಗೆ ಸಂತ್ರಸ್ತ ವೃದ್ಧರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ (9129758726) ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ‘ಡೇಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ’ದ ಅಧಿಕಾರಿ ‘ಅಮನ್ ಕುಮಾರ್ ಶರ್ಮ’ ಎಂದು ಪರಿಚಯಿಸಿಕೊಂಡಿದ್ದಾನೆ. “ನಿಮ್ಮ ಗುರುತಿನ ಚೀಟಿ (ID card) ಬಳಸಿ ಅಪರಿಚಿತರು ಸಿಮ್ ಕಾರ್ಡ್ ಪಡೆದು ಅಕ್ರಮ ಎಸಗಿದ್ದಾರೆ. ಇದನ್ನು ರದ್ದುಗೊಳಿಸಲು ಮುಂಬೈನ ಕೊಲಬಾ ಪೊಲೀಸ್ ಠಾಣೆಗೆ ಸಂಪರ್ಕಿಸಿ” ಎಂದು ಹೇಳಿ ಕಾಲ್ ಕನೆಕ್ಟ್ ಮಾಡಿದ್ದಾನೆ.

ಬಳಿಕ ಕೊಲಬಾ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿದ ನಕಲಿ ವ್ಯಕ್ತಿಗಳು, “ನಿಮ್ಮ ಗುರುತಿನ ಚೀಟಿ ಬಳಸಿ ‘ಒ.ಎಂ ಅಬ್ದುಲ್ ಸಲಾಮ್’ ಎಂಬಾತ ಕೆನರಾ ಬ್ಯಾಂಕಿನಲ್ಲಿ ಖಾತೆ ತೆರೆದು ₹2.00 ಕೋಟಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾನೆ. ಅದರಲ್ಲಿ ನಿಮಗೆ ₹20.00 ಲಕ್ಷ ಕಮಿಷನ್ ಬಂದಿದೆ. ಈ ಪ್ರಕರಣದಲ್ಲಿ ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್‌ನಿಂದ ಅರೆಸ್ಟ್ ವಾರಂಟ್ ಜಾರಿಯಾಗಿದೆ” ಎಂದು ಬೆದರಿಸಿದ್ದಾರೆ.
ನಿಮ್ಮನ್ನು ಬಂಧಿಸಬಾರದೆಂದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಆರ್‌ಬಿಐ (RBI) ಖಾತೆಗೆ ವರ್ಗಾಯಿಸಬೇಕು. ಪರಿಶೀಲನೆಯ ನಂತರ ನಿಮ್ಮ ಹಣವನ್ನು ವಾಪಸ್ ನೀಡಲಾಗುವುದು” ಎಂದು ನಂಬಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ಸಂತ್ರಸ್ತ ವೃದ್ಧರು ದಿನಾಂಕ 12-07-2026 ರಿಂದ 27-07-2026 ರವರೆಗೆ ವಿವಿಧ ಹಂತಗಳಲ್ಲಿ ಒಟ್ಟು ₹34,48,094 ಹಣವನ್ನು ಆನ್‌ಲೈನ್ ಆರ್‌ಟಿಜಿಎಸ್ (RTGS) ಮೂಲಕ ವಂಚಕರು ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ಹಣ ಪಡೆದ ಬಳಿಕ ‘2 ದಿನಗಳಲ್ಲಿ ಹಣ ವಾಪಸ್ ನೀಡುತ್ತೇವೆ’ ಎಂದಿದ್ದ ವಂಚಕರು, 4 ದಿನ ಕಳೆದರೂ ಸ್ಪಂದಿಸದೆ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಅನುಮಾನಗೊಂಡು ಪರಿಚಿತರಿಗೆ ವಿಷಯ ತಿಳಿಸಿದಾಗ ತಾವು ‘ಡಿಜಿಟಲ್ ಅರೆಸ್ಟ್’ ಹೆಸರಿನ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ


