ಮಂಗಳೂರು: ಈ ಬಾರಿಯ ಕುದ್ರೋಳಿ ದಸರಾದಲ್ಲಿ ಡಿಜೆ ಅಬ್ಬರಕ್ಕೆ ಅವಕಾಶ ನೀಡುವುದಿಲ್ಲ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ ಆರ್ ತಿಳಿಸಿದ್ದಾರೆ.


ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕುದ್ರೋಳಿ ಕ್ಷೇತ್ರದ ದಸರೆಯಲ್ಲಿ ಡಿಜೆ ಮತ್ತು ಅಬ್ಬರಕ್ಕೆ ಅವಕಾಶ ನೀಡುವುದೇ ಇಲ್ಲ. ಕಳೆದ ವರ್ಷ ಯಾರೋ ಕೆಲವರು ತಿಳಿಯದೇ ಡಿಜೆ ಹಾಕಿದ್ದಾರೆ. ಅದನ್ನು ಪೊಲೀಸರು ತಡೆದಿದ್ದಾರೆ. ಈ ವರ್ಷ ಡಿಜೆ ಕುರಿತು ಸರ್ಕಾರವೇ ಸ್ಪಷ್ಟ ನಿಲುವು ತಾಳಿದೆ. ಎಸ್‌ಒಪಿಯಲ್ಲಿ ನಿರ್ಬಂಧಗಳ ಮಾಹಿತಿಯನ್ನು ನೀಡಲಾಗಿದೆ ಹೀಗಾಗಿ ಕುದ್ರೋಳಿ ದಸರೆಯಲ್ಲಿ ಡಿಜೆಗೆ ಅವಕಾಶ ಇಲ್ಲ ಎಂದು ಪದ್ಮರಾಜ್ ತಿಳಿಸಿದರು.
ಸಂತೆ ಇಡುವ ಜಾಗಕ್ಕೆ ಸಂಬಂಧಿಸಿ ಸ್ಪಷ್ಟವಾದ ಮಾಹಿತಿ ನೀಡಲಾಗುವುದು. ಇಲ್ಲಿ ಎಲ್ಲ ಧರ್ಮೀಯರಿಗೂ ಸಾಮಗ್ರಿಗಳನ್ನು ಮಾರಾಟ ಮಾಡಲು ಅವಕಾಶ ಇದೆ. ಎಲ್ಲರನ್ನೂ ಸಮಾನವಾಗಿ ಕಂಡ ನಾರಾಯಣ ಗುರುಗಳು ಸ್ಥಾಪಿಸಿದ ದೇವಾಲಯವಿದು. ಆದ್ದರಿಂದ ಜಾತಿ ಧರ್ಮದ ಆಧಾರದಲ್ಲಿ ಬೇಧಕ್ಕೆ ಅವಕಾಶವಿಲ್ಲ. ಇಲ್ಲಿಗೆ ಬರುವವರೆಲ್ಲರನ್ನೂ ದೇವರ ಮಕ್ಕಳೆಂದೇ ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು.
ಅಲ್ಲದೆ ಈ ಬಾರಿ ಕುದ್ರೋಳಿ ಕ್ಷೇತ್ರದ ದಸರಾ ಮಹೋತ್ಸವದಲ್ಲಿ ಕಿನ್ನಿ ಪಿಲಿ (ಮರಿ ಹುಲಿ) ಸ್ಪರ್ಧೆ ಮತ್ತು ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 4 ಗಂಟೆಗೇ ಆರಂಭವಾಗಲಿವೆ. ಸಾಹಿತ್ಯ ಚಟುವಟಿಕೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
