ಲಂಚ ಸ್ವೀಕಾರ : ಪುತ್ತೂರು ತಹಶೀಲ್ದಾರ್ ಕಚೇರಿ ಸಿಬಂದಿ ಲೋಕಾಯುಕ್ತ ಬಲೆ, ತಹಶೀಲ್ದಾರ್ ಪರಾರಿ..!

Prakhara News
1 Min Read

ಪುತ್ತೂರು: ಸಾರ್ವಜನಿಕರೊಬ್ಬರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚದ ಹಣದ ಸಮೇತ ಆರೋಪಿಯನ್ನು ಬಂಧಿಸಿದ ಘಟನೆ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಲೋಕಾಯುಕ್ತ ದಾಳಿಯ ವೇಳೆ ಪುತ್ತೂರು ತಹಶೀಲ್ದಾರ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪುತ್ತೂರು ತಾಲೂಕಿನ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಎಫ್.ಡಿ.ಎ ಸುನೀಲ್ ಎಂಬಾತ ದೂರುದಾರರಿಂದ 12,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸುನೀಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪುತ್ತೂರು ತಹಶೀಲ್ದಾರ್ ಕುಡಲಗಿ ಪರಾರಿಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೂರುದಾರನ ಚಿಕ್ಕಪ್ಪಗೆ ಸೇರಿದ 65 ಸೆಂಟ್ಸ್ ಜಮೀನು ಅಕ್ರಮ ಸಕ್ರಮದನ್ವಯ ಮಂಜೂರಾಗಿದ್ದು, ನಂತರ ಅವರು ವೀಲುನಾಮೆ ಮೂಲಕ ದೂರುದಾರನಿಗೆ ಹಕ್ಕು ಬರೆಸಿಕೊಟ್ಟಿದ್ದರು. ಜಾಗವನ್ನು ಪರಭಾರೆ ಮಾಡಲು ತಹಶೀಲ್ದಾರ್ ನಿರಾಕ್ಷೇಪಣಾ ಪತ್ರ ಅವಶ್ಯಕವಾಗಿದ್ದರಿಂದ, 2024ರ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಬಾಕಿ ಇರುವುದರಿಂದ ವಿಚಾರಿಸಿದಾಗ, ಕೇಸ್ ವರ್ಕರ್ (ಎಫ್.ಡಿ.ಎ) ಸುನೀಲ್ ತಹಶೀಲ್ದಾರ್‌ ಸಹಿಗೆ ಲಂಚ ಅವಶ್ಯಕ ಎಂದು ಹೇಳಿ ಹಣ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಅವರು ಮಂಗಳೂರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸುನೀಲ್ ಲಂಚ ಸ್ವೀಕರಿಸುವ ವೇಳೆ ಬಲೆಗೆ ಬಿದ್ದಿದ್ದಾರೆ. ತಹಶೀಲ್ದಾರ್ ಕುಡಲಗಿ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಆತನ ಪಾತ್ರದ ಕುರಿತು ತನಿಖೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಲೋಕಾಯುಕ್ತ ಕಾರ್ಯಾಚರಣೆಯ ತಂಡದಲ್ಲಿ ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ್ ಚಂದ್ರ ಅವರ ನೇತೃತ್ವದಲ್ಲಿ, ಡಿವೈಎಸ್ಪಿ ಡಾ. ಗಾನ.ಪಿ. ಕುಮಾರ್, ಇನ್ಸ್ಪೆಕ್ಟರ್‌ಗಳು ಭಾರತಿ, ಚಂದ್ರಶೇಖರ್ ಕೆ.ಎನ್, ರವಿ ಪವರ್ ಹಾಗೂ ಸಿಬ್ಬಂದಿ ಮಹೇಶ್, ರಾಜಪ್ಪ, ರಾಧಾಕೃಷ್ಣ, ಅದರ್ಶ, ವಿವೇಕ್, ವಿನಾಯಕ, ಪ್ರವೀಣ್, ಗಂಗಣ್ಣ, ನಾಗಪ್ಪ, ಮಾಹದೇವ, ಪವಿತ್ರ, ದುಂಡಪ್ಪ, ರುದ್ರಗೌಡ, ರಾಜಶೇಖರ್ ಪಾಲ್ಗೊಂಡಿದ್ದರು.

Share This Article
Leave a Comment