ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಳಿಂಜಂಪರ ಬಳಿ ಬಾತ್‌ರೂಮ್‌ನ ಸ್ನಾನದ ತೊಟ್ಟಿಯಲ್ಲಿ (Bathtub) ಇಬ್ಬರು ಮಕ್ಕಳು ಮುಳುಗಿ ಸಾವನಪ್ಪಿದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಇದೊಂದು ಭೀಕರ ಕೊಲೆ ಎಂದು ಪೊಲೀಸರು ಘೋಷಿಸಿದ್ದಾರೆ. ಸ್ವತಂತ್ರ ಜೀವನ ಹಾಗೂ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡಲು ಮಕ್ಕಳು ಅಡ್ಡಿಯಾಗಿದ್ದರೆಂದು ತಾಯಿ ನಿವೇದ್ಯಾ ತನ್ನಿಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿರುವುದಾಗಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾಳೆ. ಈ ಕೃತ್ಯದಲ್ಲಿ ಐದು ವರ್ಷದ ಜೆನ್ನಿಫರ್ ಜೂಲಿಯೆಟ್ ಹಾಗೂ ಮೂರು ವರ್ಷದ ರಾಬಿನ್ ಕ್ರಿಸ್ಟೋಫರ್ ಎಂಬ ಮುಗ್ಧ ಮಕ್ಕಳು ಮೃತಪಟ್ಟಿದ್ದಾರೆ.


ವಡಕರಪತಿಯ ಮನಲ್ಕಾಡು ಪಝನಿಯಾರ್ಪಾಳಯಂ ನಿವಾಸಿ, ಮರ ಕಡಿಯುವ ಕೆಲಸ ಮಾಡುವ ಜಾನ್‌ಕುಮಾರ್ ಮತ್ತು ನಿವೇದ್ಯಾ ದಂಪತಿ ಎರಡು ತಿಂಗಳ ಹಿಂದಷ್ಟೇ ಮೆನನ್‌ಪಾರಾದ ಕೂರಂಗಡುವಿನ ಬಾಡಿಗೆ ಮನೆಗೆ ವಾಸ್ತವ್ಯ ಬದಲಾಯಿಸಿದ್ದರು. ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ಜಾನ್‌ಕುಮಾರ್ ಕೆಲಸಕ್ಕೆ ತೆರಳಿದ್ದ ವೇಳೆ, ಮನೆಯಲ್ಲಿ ನಿವೇದ್ಯಾ ಹಾಗೂ ಇಬ್ಬರು ಮಕ್ಕಳು ಮಾತ್ರವೇ ಇದ್ದರು.
ಆರಂಭದಲ್ಲಿ ನಾಟಕವಾಡಿದ್ದ ನಿವೇದ್ಯಾ, ಮಕ್ಕಳು ಕಾಣೆಯಾಗಿದ್ದಾರೆಂದು ನೆರೆಹೊರೆಯವರ ಬಳಿ ಹೇಳಿಕೊಂಡಿದ್ದಳು. ಬಳಿಕ ಹಿತ್ತಲಿನಲ್ಲಿರುವ ಸ್ನಾನಗೃಹದ ಬಾತ್‌ಟಬ್‌ನಲ್ಲಿ ಮಕ್ಕಳಿಬ್ಬರೂ ಚಲನರಹಿತವಾಗಿ ಬಿದ್ದಿರುವುದನ್ನು ಕಂಡು ಕಿರುಚಾಡಿದ್ದಳು. ಸ್ಥಳೀಯರು ತಕ್ಷಣವೇ ಮಕ್ಕಳನ್ನು ನಟ್ಟುಕಲ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಮಕ್ಕಳು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.
ಆದರೆ, ಮಕ್ಕಳ ಸಾವಿನ ಬಗ್ಗೆ ತಂದೆ ಜಾನ್‌ಕುಮಾರ್ ಹಾಗೂ ಕುಟುಂಬಸ್ಥರು ತೀವ್ರ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. “ಬಾತ್‌ಟಬ್‌ನಲ್ಲಿ ಮಕ್ಕಳಿಬ್ಬರೂ ಒಂದೇ ಸಮಯದಲ್ಲಿ ಮುಳುಗಿ ಸಾಯುವಷ್ಟು ನೀರಿರಲಿಲ್ಲ. ಒಬ್ಬ ಮಗು ಬಿದ್ದಿದ್ದರೂ ಇನ್ನೊಬ್ಬರು ಕೂಗಿಕೊಳ್ಳುತ್ತಿದ್ದರು.

ಪೊಲೀಸರು ನಿವೇದ್ಯಾಳನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಆಕೆ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ವಿಚಾರಣೆ ವೇಳೆ ನಿವೇದ್ಯಾ, “ನನಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಬೆಳೆಯಲು ಹಾಗೂ ಉನ್ನತ ವ್ಯಾಸಂಗ ಮಾಡಲು ಆಸೆಯಿತ್ತು. ಆದರೆ ಮಕ್ಕಳು ನನ್ನ ಸ್ವತಂತ್ರ ಜೀವನಕ್ಕೆ ದೊಡ್ಡ ಅಡ್ಡಿಯಾಗಿದ್ದರು. ಆದ್ದರಿಂದ ಅವರನ್ನು ಕೊಲೆ ಮಾಡಿದೆ” ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾಳೆ.
ಇದರ ಜೊತೆಗೆ, ಮಕ್ಕಳು ತನ್ನವರಲ್ಲ ಹಾಗೂ ಗಂಡನ ಕುಟುಂಬಸ್ಥರು ತನ್ನನ್ನು ನಿಂದಿಸುತ್ತಿದ್ದರೆಂದು ಆಕೆ ಹೇಳಿಕೊಂಡಿದ್ದಾಳಾದರೂ, ಪೊಲೀಸರು ಈ ಹೇಳಿಕೆಯನ್ನು ಪೂರ್ಣವಾಗಿ ನಂಬಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಮತ್ತು ಕೊಳಿಂಜಂಪರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಕೊಲೆಯ ನಿಜವಾದ ಶಂಕೆಗಳ ಕುರಿತು ಆಳವಾದ ವಿಚಾರಣೆ ನಡೆಸುತ್ತಿದ್ದಾರೆ.

