ಕೇರಳ ನರ್ಸ್ ನಿಮಿಷಾ ಪ್ರಿಯಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: Yemen ಗಲ್ಲು ಶಿಕ್ಷೆ ರದ್ದಾಗಿಲ್ಲ- MEA ಸ್ಪಷ್ಟನೆ

Prakhara News
2 Min Read

ನವದೆಹಲಿ: ಯುದ್ಧಪೀಡಿತ ಯೆಮೆನ್ ದೇಶದಲ್ಲಿ ಮರಣದಂಡನೆ ಎದುರಿಸುತ್ತಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ (MEA), ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಕೇಂದ್ರ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಯಮೆನ್ ಗಲ್ಲು ಶಿಕ್ಷೆಯನ್ನು ಮುಂದೂಡಿದೆ, ಆದರೆ ರದ್ದುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ಮಾತುಕತೆ ನಡೆಸಲು ಐದು ಸದಸ್ಯರ ನಿಯೋಗವನ್ನು ಯೆಮೆನ್‌ಗೆ ಕಳುಹಿಸುವಂತೆ ಸೇವ್ ನಿಮಿಷಾ ಪ್ರಿಯಾ ಅಂತರರಾಷ್ಟ್ರೀಯ ಕ್ರಿಯಾ ಮಂಡಳಿಯ ವಿನಂತಿಯನ್ನು ವಿದೇಶಾಂಗ ಸಚಿವಾಲಯ (MEA) ನಿರಾಕರಿಸಿದೆ.

ಗಂಭೀರ ಭದ್ರತಾ ಕಾಳಜಿಗಳು ಮತ್ತು ದೇಶದ ಪ್ರಸ್ತುತ ಆಡಳಿತದೊಂದಿಗೆ ರಾಜತಾಂತ್ರಿಕ ಸಂಬಂಧಗಳ ಕೊರತೆಯನ್ನು ವಿದೇಶಾಂಗ ಸಚಿವಾಲಯ ಉಲ್ಲೇಖಿಸಿದ್ದು, ಸೇವ್ ನಿಮಿಷಾ ಪ್ರಿಯಾ ಅಂತರರಾಷ್ಟ್ರೀಯ ಕ್ರಿಯಾ ಮಂಡಳಿಯ ಐದು ಸದಸ್ಯರ ನಿಯೋಗಕ್ಕೆ ಯೆಮೆನ್‌ಗೆ ಪ್ರಯಾಣಿಸಲು ಅನುಮತಿ ನಿರಾಕರಿಸಿದೆ.

ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಪ್ರಾತಿನಿಧ್ಯ ನೀಡಲು ಮಂಡಳಿಗೆ ಅವಕಾಶ ನೀಡಿದ್ದರೂ ಸಚಿವಾಲಯ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಹದಗೆಟ್ಟಿರುವ ಭದ್ರತಾ ಪರಿಸ್ಥಿತಿಯಿಂದಾಗಿ ಯೆಮೆನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ರಿಯಾದ್‌ಗೆ ಸ್ಥಳಾಂತರಿಸಲಾಗಿದೆ. ಸನಾದಲ್ಲಿ ಪ್ರಸ್ತುತ ಆಡಳಿತದೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧವಿಲ್ಲ ಎಂದು ಹೇಳಿದೆ.

ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಗಳು ಸನಾಗೆ ಪ್ರಯಾಣ ಬೆಳೆಸುವುದು ಇನ್ನಷ್ಟು ಅಪಾಯಕಾರಿಯನ್ನಾಗಿಸಿದೆ. ಪ್ರಕರಣದಲ್ಲಿ ಮಾತುಕತೆಗಳನ್ನು ನಿಮಿಷ ಪ್ರಿಯಾ ಅವರ ಕುಟುಂಬ ಅಥವಾ ಅವರ ಅಧಿಕೃತ ಪ್ರತಿನಿಧಿಗಳು ಮಾತ್ರ ನಿರ್ವಹಿಸುತ್ತಿದ್ದಾರೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಚಿವಾಲಯವು ನಿಯೋಗಕ್ಕೆ ಪ್ರಯಾಣ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಪ್ರಿಯಾ ಅವರ ಕಾನೂನು ರಕ್ಷಣೆಯನ್ನು ಬೆಂಬಲಿಸುತ್ತಿರುವ ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಕೇಂದ್ರವು ಇಬ್ಬರು ಅಥವಾ ಮೂವರು ಪ್ರತಿನಿಧಿಗಳು ಮತ್ತು ಕೇರಳದ ಧಾರ್ಮಿಕ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಯೆಮೆನ್‌ಗೆ ಪ್ರಯಾಣಿಸಲು ಮತ್ತು ಸಂತ್ರಸ್ತೆಯ ಕುಟುಂಬದೊಂದಿಗೆ ಮಾತುಕತೆ ನಡೆಸಲು ಅನುಮತಿ ನೀಡುವಂತೆ ಕೇಳಿಕೊಂಡಿತ್ತು. ಇದು ಶರಿಯಾ ಕಾನೂನಿನ ಅಡಿಯಲ್ಲಿ ಕ್ಷಮಾದಾನ ಪಡೆಯಲು ಪ್ರಯತ್ನವಾಗಿದೆ.

ಸದ್ಯ ಪ್ರಕರಣದಲ್ಲಿ ಪರಿಹಾರವನ್ನು ತಲುಪುವ ಪ್ರಯತ್ನಗಳ ಭಾಗವಾಗಿ ಕೆಲವು ಸ್ನೇಹಪರ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

2017ರಲ್ಲಿ ಯೇಮನ್‌ನ ನಾಗರಿಕ ತಲಾಲ್‌ ಅಬ್ದೋ ಮಹ್ದಿ ಹತ್ಯೆ ಮಾಡಿದ ಆರೋಪದ ಮೇಲೆ ನರ್ಸ್‌ ಆಗಿದ್ದ ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಕೊಲ್ಲಂಗೋಡ್‌ನ ನಿವಾಸಿ ನಿಮಿಷಾ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿತ್ತು. 2017 ರಲ್ಲಿ ಶಿಕ್ಷೆಗೊಳಗಾಗಿ ಸನಾದಲ್ಲಿ ಜೈಲಿನಲ್ಲಿ ಸೆರೆ ವಾಸ ಅನುಭವಿಸುತ್ತಿದ್ದಾರೆ.

ಈ ಮೊದಲು ಜುಲೈ 16 ಕ್ಕೆ ನಿಮಿಷಾ ಅವರಿಗೆ ಗಲ್ಲು ಶಿಕ್ಷೆ ನಿಗದಿಯಾಗಿತ್ತು. ನಂತರ ಭಾರತೀಯ ಅಧಿಕಾರಿಗಳ ಹಸ್ತಕ್ಷೇಪದ ನಂತರ ಮರಣದಂಡನೆಯನ್ನು ಮುಂದೂಡಲಾಯಿತು.

Share This Article
Leave a Comment