ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಕೇರಳ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಇಂದು ಅನುಮೋದಿಸಿದೆ. ಕೇರಳ ಎಂಬ ಹೆಸರು ಇಂಗ್ಲಿಷ್ ಭಾಷೆಯದ್ದಾಗಿರುವುದರಿಂದ ಮಲಯಾಳಂ ಭಾಷೆಯ ಕೇರಳಂ ಎಂಬ ಹೆಸರನ್ನು ಬಳಸಲು ನಿರ್ಧರಿಸಲಾಗಿದೆ.


ಇತ್ತೀಚೆಗೆ ಉದ್ಘಾಟನೆಗೊಂಡ ದೆಹಲಿಯ ಹೊಸ ಪಿಎಂಒ ಕಟ್ಟಡವಾದ ಸೇವಾ ತೀರ್ಥದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆ ಇದಾಗಿದೆ. ಈ ನಿರ್ಣಯವನ್ನು ಮಂಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂವಿಧಾನದಲ್ಲಿ ನಮೂದಿಸಲಾದ ಎಲ್ಲಾ ಭಾಷೆಗಳಲ್ಲಿ ದಕ್ಷಿಣ ರಾಜ್ಯವಾದ ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದರು.


ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾವಣೆ ಮಾಡಲು ಕೇರಳದ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದೀಗ ಈ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯೂ ಸಿಕ್ಕಿದೆ. ಕೇರಳ ರಾಜ್ಯದ ಜನರ ಭಾವನೆಗಳಿಗೆ ಗೌರವ ನೀಡುವುದು ಇದರ ಮುಖ್ಯ ಉದ್ದೇಶ. ಭಾರತದ ಸಂವಿಧಾನದ ಪ್ರಕಾರ ರಾಜ್ಯದ ಹೆಸರನ್ನು ಬದಲಾಯಿಸಲು ಈಗಾಗಲೇ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆ ಅಂಗೀಕರಿಸಲಾಗಿದೆ. ಇದಕ್ಕೆ ರಾಷ್ಟ್ರಪತಿಯ ಅನುಮೋದನೆಯೊಂದು ಬಾಕಿ ಇದೆ.
ಮಲಯಾಳಂನಲ್ಲಿ ಕೇರಳಂ ಅಂದರೆ ‘ತೆಂಗಿನಕಾಯಿ ನಾಡು’ ಎಂದರ್ಥ. ‘ಕೇರಾ’ ಅಂದರೆ ತೆಂಗಿನಕಾಯಿ, ‘ಆಲಂ’ ಅಂದರೆ ನಾಡು ಅಥವಾ ಭೂಮಿ ಎಂದರ್ಥ. ಎರಡರನ್ನೂ ಸೇರಿಸಿ ಕೇರಳಂ(ತೆಂಗಿನಕಾಯಿ ನಾಡು) ಎಂದು ಕರೆಯಲಾಗುತ್ತದೆ. ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ತೆಂಗಿನಕಾಯಿಯನ್ನು ಬೆಳೆಯಲಾಗುತ್ತದೆ. ಕೇರಳ ಅನ್ನುವುದು ಭೌಗೋಳಿಕ, ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸೂಚಿಸುತ್ತದೆ.ಹೀಗಾಗಿ, ಕೇರಳ ಹೆಸರನ್ನು ಕೇರಳಂ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

