ಮಂಗಳೂರು: ಅಂಚೆ ಇಲಾಖೆಯಲ್ಲಿ ಸಿಬ್ಬಂದಿಯ ಮೇಲೆ ಗುರಿ ಸಾಧನೆ (ಟಾರ್ಗೆಟ್) ಹೆಸರಿನಲ್ಲಿ ಮಾನಸಿಕ ಒತ್ತಡ ಹೇರಿ, ಸ್ವಂತ ಹಣದಲ್ಲಿ ವಿವಿಧ ಖಾತೆಗಳನ್ನು ತೆರೆಯುವಂತೆ ಒತ್ತಾಯಿಸಲಾಗುತ್ತಿದೆ. ಅಲ್ಲದೆ, ವಿದೇಶಿ ಸಲಹಾ ಸಂಸ್ಥೆ ಮೆಕಿನ್ಸಿ (McKinsey) ಶಿಫಾರಸುಗಳ ಆಧಾರದ ಮೇಲೆ ಇಲಾಖೆಯನ್ನು ಖಾಸಗೀಕರಣದತ್ತ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಭಾರತೀಯ ಅಂಚೆ ನೌಕರರ ಒಕ್ಕೂಟ ರಾಷ್ಟ್ರವ್ಯಾಪಿ ಹೋರಾಟ ಹಾಗೂ ಮುಷ್ಕರಕ್ಕೆ ಕರೆ ನೀಡಿದೆ.


ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಅಂಚೆ ನೌಕರರ ಸಂಘದ ಪದಾಧಿಕಾರಿ ದಯಾನಂದ ಕತ್ತಲ್ ಸಾರ್ ಮಾತನಾಡಿ, 170 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಇಲಾಖೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿಶ್ವಾಸಾರ್ಹ ಸೇವೆ ಒದಗಿಸುತ್ತ ಬಂದಿದೆ. ಜನರೊಂದಿಗೆ ಭಾವನಾತ್ಮಕ ಬಾಂಧವ್ಯ ಹೊಂದಿರುವ ಇಲಾಖೆಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಸರ್ಕಾರ ಅವೈಜ್ಞಾನಿಕ ನೀತಿಗಳನ್ನು ಜಾರಿಗೆ ತರುತ್ತಿದ್ದು, ಅದರ ಪರಿಣಾಮ ಸಿಬ್ಬಂದಿ ನಿರಂತರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿ ತಿಂಗಳು ಅವೈಜ್ಞಾನಿಕ ಗುರಿಗಳನ್ನು ನಿಗದಿಪಡಿಸಿ, ಅವುಗಳನ್ನು ಕಡ್ಡಾಯವಾಗಿ ಪೂರೈಸುವಂತೆ ಸಿಬ್ಬಂದಿಯನ್ನು ಒತ್ತಾಯಿಸಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಸಿಬ್ಬಂದಿಯೇ ತಮ್ಮ ಸ್ವಂತ ಹಣದಿಂದ ವಿವಿಧ ಉಳಿತಾಯ ಖಾತೆಗಳನ್ನು ತೆರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಶೋಷಣೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ಜುಲೈ 20ರಿಂದ 27ರವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ, ಜುಲೈ 28ರಂದು ಮಧ್ಯಾಹ್ನದ ಊಟದ ವಿರಾಮದ ವೇಳೆ ವಿಭಾಗೀಯ ಕಚೇರಿಗಳ ಎದುರು ಪ್ರತಿಭಟನೆ, ಆಗಸ್ಟ್ 5ರಂದು ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ಹಾಗೂ ಆಗಸ್ಟ್ 18ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.
ಭಾರತೀಯ ಅಂಚೆ ನೌಕರರ ಸಂಘದ ವಲಯ ಕಾರ್ಯದರ್ಶಿ ವೀರೇಶ್ ಮಾತನಾಡಿ, ಟಾರ್ಗೆಟ್ ಹೆಸರಿನಲ್ಲಿ ಸಿಬ್ಬಂದಿ ಹಾಗೂ ಗ್ರಾಮೀಣ ಅಂಚೆ ಸೇವಕರ (GDS) ಮೇಲಿನ ಶೋಷಣೆಯನ್ನು ನಿಲ್ಲಿಸುವುದು, ಸಿಬ್ಬಂದಿಯಿಂದ ಸ್ವಂತ ಹಣದಲ್ಲಿ ಖಾತೆ ತೆರೆಯುವಂತೆ ಒತ್ತಾಯಿಸುವ ಕ್ರಮವನ್ನು ರದ್ದುಪಡಿಸುವುದು, ರೈಲ್ವೆ ಅಂಚೆ ಸೇವೆಯನ್ನು ಪುನರಾರಂಭಿಸುವುದು, ಮೇಲ್ ಮೋಟಾರ್ ಸರ್ವಿಸ್ ಹಾಗೂ ಸಿವಿಲ್ ವಿಂಗ್‌ನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಇಲಾಖೆಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕುವುದು, ಪೋಸ್ಟಲ್ ಅಕೌಂಟ್ಸ್ ವಿಕೇಂದ್ರೀಕರಣವನ್ನು ನಿಲ್ಲಿಸುವುದು, PACO/PARO ವಿಲೀನ ಸೇರಿದಂತೆ ಕ್ಯಾಡರ್ ಪುನರ್‌ರಚನೆ ಹಾಗೂ ಬಡ್ತಿ ಸೌಲಭ್ಯಗಳನ್ನು ಜಾರಿಗೊಳಿಸುವುದು, ಮಾಜಿ ಸೈನಿಕರಿಂದ ನೇಮಕಗೊಂಡ ಸಿಬ್ಬಂದಿಯ ವೇತನ ವ್ಯತ್ಯಾಸಗಳನ್ನು ಸರಿಪಡಿಸುವುದು, ಅನುಕಂಪ ಆಧಾರಿತ ನೇಮಕಾತಿಯ 5 ಶೇಕಡಾ ಮಿತಿಯನ್ನು ತೆರವುಗೊಳಿಸುವುದು, NDC ವ್ಯವಸ್ಥೆಯನ್ನು ರದ್ದುಪಡಿಸಿ ಹಿಂದಿನ ವಿತರಣಾ ವ್ಯವಸ್ಥೆಯನ್ನು ಮರುಜಾರಿಗೊಳಿಸುವುದು ಹಾಗೂ ಸೆಪ್ಟೆಂಬರ್ 17ರ ವಿಶ್ವಕರ್ಮ ಜಯಂತಿಯನ್ನು ರಾಷ್ಟ್ರೀಯ ಕಾರ್ಮಿಕ ದಿನವೆಂದು ಘೋಷಿಸಿ ಅಂಚೆ ಇಲಾಖೆಗೆ ರಜಾದಿನವಾಗಿ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರವಿ ಚೌದ್ರಿ, ದೇವಪ್ಪ ಜಿ. ಮ್ಯಾಗೇರಿ, ಸಂತೋಷ್ ಬೂದಿ ಹಾಗೂ ಪ್ರಕಾಶ್ ಕರಡಿ ಉಪಸ್ಥಿತರಿದ್ದರು.


