ಹುಬ್ಬಳ್ಳಿ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಅತಿ ವೇಗವಾಗಿ ಬೈಕ್ ಮತ್ತು ಐಷಾರಾಮಿ ಕಾರು ಚಲಾಯಿಸಿ ರೀಲ್ಸ್ ಚಿತ್ರೀಕರಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಬಿಜೆಪಿ ಮುಖಂಡನ ಅಪ್ರಾಪ್ತ ಮಗ ಸಾವನಪ್ಪಿದ ಘಟನೆ ನಡೆದಿದೆ. ಮೃತರನ್ನು ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರ ನಮೀಶ್ ಸಂಗಳದ (15) ಎಂದು ಗುರುತಿಸಲಾಗಿದೆ.


ಮೈಸೂರಿನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಮೀಶ್, ಯುಗಾದಿ ರಜೆಗಾಗಿ ಹುಬ್ಬಳ್ಳಿಯ ಮನೆಗೆ ಮರಳಿದ್ದರು. ಗುರುವಾರ ಶೇಜಾವಾಡಕರ್ ರಸ್ತೆಯಲ್ಲಿ ಸ್ನೇಹಿತರೊಂದಿಗೆ ಸೇರಿ ಬೈಕ್ ಹಾಗೂ ಆಡಿ ಕಾರನ್ನು ಬಳಸಿ ರೀಲ್ಸ್ ಚಿತ್ರೀಕರಿಸಲು ಮುಂದಾಗಿದ್ದರು. ರೀಲ್ಸ್ ಚಿತ್ರೀಕರಣದ ವೇಳೆ ಮತ್ತೊಬ್ಬ 15 ವರ್ಷದ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಆಡಿ ಕಾರು, ನಮೀಶ್ ಸವಾರಿ ಮಾಡುತ್ತಿದ್ದ ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ನಮೀಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲನಾ ಪರವಾನಗಿ ಇಲ್ಲದ ಅಪ್ರಾಪ್ತರಿಗೆ ಐಷಾರಾಮಿ ಕಾರು ನೀಡಿದ ಪೋಷಕರ ವಿರುದ್ಧವೂ ತನಿಖೆ ಕೈಗೊಳ್ಳಲಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಲಾಯಿಸುತ್ತಿದ್ದ ಬಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.




