ಮಂಗಳೂರು : ಹೋಮಿಯೋಪಥಿಕ್ ಫಾರ್ಮಸಿ ವತಿಯಿಂದ ಹೋಮಿಯೋಪಥಿಕ್ ವಿದ್ಯಾರ್ಥಿಗಳಿಗೆ ಸನ್ಮಾನ

Prakhara News
1 Min Read

ಮಂಗಳೂರು : ದಸರಾ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನ ಕೋಡಿಯಾಲ್ ಬೈಲ್ ಎಂಜಿ ರೋಡ್ ದೀಪಾ ಕಾಂಪ್ಲೆಕ್ಸ್ ಬಳಿ ಕಳೆದ ನಾಲ್ಕು ವರ್ಷಗಳಿಂದ ಶ್ರೀಯುತ ಪ್ರಮೋದ್ ಕರ್ಕೇರ ನೇತೃತ್ವದಲ್ಲಿ, ಶ್ರೀ ರವಿರಾಜ್ ಚೌಟ ಇವರ ಸಹಭಾಗಿತ್ವದಲ್ಲಿ ಪಿಲಿ ಅಜನೆ ಎಂಬ ಕಾರ್ಯಕ್ರಮವು ನಡೆಯುತ್ತಿದ್ದು, ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ನಾಲ್ಕನೇ ವರ್ಷದ ಪಿಲಿ ಅಜನೆ ಕಾರ್ಯಕ್ರಮದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳತ್ತ ಹೆಜ್ಜೆ ಇಟ್ಟಿದೆ.


ಹೋಮಿಯೋಪಥಿ ಎಂಬ ವೈದ್ಯಕೀಯ ಪದ್ಧತಿ ಇತರ ವೈದ್ಯಕೀಯ ಪದ್ಧತಿಗಳಷ್ಟೇ ಪರಿಣಾಮಕಾರಿಯಾಗಿದೆ. ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಯಾವುದೇ ಪಾರ್ಶ್ವ ಪರಿಣಾಮಗಳಿಲ್ಲದೆ ಉತ್ತಮ ಫಲಿತಾಂಶ ನೀಡುತ್ತದೆ. ಇಂದು ಈ ಪದ್ಧತಿಯನ್ನು ಅನೇಕರು ಅನುಸರಿಸುತ್ತಿದ್ದರೂ, ಇನ್ನೂ ಇತರ ಪದ್ಧತಿಗಳಷ್ಟು ವ್ಯಾಪಕತೆಯನ್ನು ಪಡೆದುಕೊಂಡಿಲ್ಲ. ಆದರೆ ಹೆಚ್ಚಿನ ಬೆಂಬಲವಿಲ್ಲದಿದ್ದರೂ, ಈ ಪದ್ಧತಿ ತನ್ನದೇ ಆದ ಪ್ರಾಬಲ್ಯವನ್ನು ವಿಶ್ವ ಮಟ್ಟದಲ್ಲಿ ಸಾಧಿಸಿದೆ.

ಹೋಮಿಯೋಪಥಿಯ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸಲು ಮತ್ತು ಹೊಸ ವೈದ್ಯರನ್ನು ಹಾಗೂ ಹಿರಿಯ ತಜ್ಞರನ್ನು ಗೌರವಿಸುವ ಉದ್ದೇಶದಿಂದ ಮಂಗಳೂರು ಹೋಮಿಯೋಪಥಿಕ್ ಫಾರ್ಮಸಿ ಎಂಬ ಖ್ಯಾತ ಸಂಸ್ಥೆಯು ಮುಂದಾಗಿತ್ತು. ಈ ಅರ್ಥಪೂರ್ಣ ಕಾರ್ಯಕ್ಕೆ ಪಿಲಿ ಅಜನೆ ವೇದಿಕೆಯು ಅವಕಾಶವನ್ನು ನೀಡಿತ್ತು. ಈ ಹಿನ್ನಲೆಯಲ್ಲಿ ಪಿಲಿ ಅಜನೆ ವೇದಿಕೆಯಲ್ಲಿ ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಯೆನೆಪೋಯ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಫಾದರ್ ಮ್ಯುಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ಹಿರಿಯ ಹೋಮಿಯೋಪಥಿಕ್ ತಜ್ಞರಾದ ಡಾ. ಶಿವಪ್ರಸಾದ್ ಮತ್ತು ಶಾಮ ರಾವ್ ಫೌಂಡೇಶನ್ ಹಾಗೂ ಶ್ರೀನಿವಾಸ ಗ್ರೂಫ್ ಆಫ್ ಕಾಲೇಜು ಕಾರ್ಯದರ್ಶಿ ಶ್ರೀಮತಿ ಮಿತ್ರ ಇವರು ಸನ್ಮಾನಿಸಿದರು. ಡಾ. ಪ್ರವೀಣ ರೈ ಮತ್ತು ಡಾ. ನಿವೇದಿತಾ ರೈ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


ಇನ್ನು, ಪಿಲಿ ಅಜನೆ ತಂಡವು ಮಂಗಳೂರು ಹೋಮಿಯೋಪಥಿಕ್ ಫಾರ್ಮಸಿ ಸಂಸ್ಥೆಯ ಶ್ರೀ ಪವನ್ ಅವರೊಂದಿಗೆ ಕೈಜೋಡಿಸಿ ಎಲ್ಲಾ ಹೋಮಿಯೋಪಥಿ ವಿದ್ಯಾರ್ಥಿಗಳು ಮತ್ತು ವೈದ್ಯರನ್ನು ಗೌರವಿಸುವ ಮೂಲಕ ಸಾಮಾಜಿಕ ಜಾಗೃತಿಗೆ ಅನನ್ಯ ವೇದಿಕೆಯನ್ನು ಒದಗಿಸಿದರು.

Share This Article
Leave a Comment