ಮಂಗಳೂರು: ನಕಲಿ ಆಧಾರ್ ಕಾರ್ಡ್, ಆರ್‌ಟಿಸಿ ಸೃಷ್ಟಿಸುತ್ತಿದ್ದ ಪ್ರಕರಣ- ಇಬ್ಬರು ಆರೋಪಿಗಳ ಬಂಧನ

Prakhara News
1 Min Read

ಮಂಗಳೂರು: ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಆರ್‌ಟಿಸಿಗಳನ್ನು ಸೃಷ್ಟಿಸಿ ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿ ವಂಚಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆಗಳನ್ನು ಸರ್ಕಾರಿ ಇಲಾಖೆಗಳು ಮತ್ತು ನ್ಯಾಯಾಲಯಗಳಿಂದ ಜಾಮೀನು ಪಡೆದುಕೊಳ್ಳಲು ಬಳಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲ್ಕಿ ಬಪ್ಪನಾಡು ನಿವಾಸಿಗಳಾದ ಅಬ್ದುಲ್ ರೆಹಮಾನ್ ಮತ್ತು ನಿಶಾಂತ್ ಎಂಬವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ನಕಲಿ ಆಧಾರ್‌ ಕಾರ್ಡ್‌ ಮೂಲಕ ಇವರು ಭಾರಿ ವಂಚನೆ ನಡೆಸಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ನಗರದ ದಡ್ಡಲಕಾಡ್ ಎಂಬಲ್ಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಸರ್ಕಾರದ ಬೇರೆ ಬೇರೆ ಇಲಾಖೆಯ ಕಚೇರಿ ಮತ್ತು ನ್ಯಾಯಾಲಯಕ್ಕೆ ವಂಚಿಸುತ್ತಿರುವ ವ್ಯಕ್ತಿಯ ಬಗ್ಗೆ ನಮಗೆ ಮಂಗಳವಾರ ಮಾಹಿತಿ ಲಭಿಸಿತ್ತು. ಅದರಂತೆ ಸ್ಥಳಕ್ಕೆ ತೆರಳಿ ಆರೋಪಿ ಅಬ್ದುಲ್ ರೆಹಮಾನ್‌ನನ್ನು ವಿಚಾರಿಸಿದಾಗ ಆತ ಕೊಡಿಯಾಲ್‌ಬೈಲ್‌ನ ಆನ್‌ಲೈನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ನಿಶಾಂತ್‌ನೊಂದಿಗೆ ಸೇರಿಕೊಂಡು ಆಧಾರ್ ಕಾರ್ಡ್‌ನ ನಂಬರ್, ಹೆಸರು, ಪೋನ್ ನಂಬರ್, ವಿಳಾಸ ಮತ್ತು ಫೋಟೊವನ್ನು ಎಡಿಟ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಉರ್ವ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಬ್ದುಲ್ ರೆಹಮಾನ್‌ನ ಬಳಿ ಎರಡು ಫೋನ್‌ಗಳಲ್ಲಿ ಹಲವಾರು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಅಬ್ದುಲ್ ರೆಹಮಾನ್ ಮತ್ತು ನಿಶಾಂತ್ ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ವಿವಿಧ ಇಲಾಖೆಗಳು ಮತ್ತು ನ್ಯಾಯಾಲಯದಲ್ಲಿ ಜಾಮೀನು ನೀಡಲು ಸಾರ್ವಜನಿಕರಿಗೆ ನೀಡಿ ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಜಾಲದಲ್ಲಿ ಇನ್ನೂ ಕೆಲವರು ಭಾಗಿಯಾರುವ ಶಂಕೆಯಿದೆ.

ಆಧಾರ್ ಸಂಖ್ಯೆಗಳು, ಹೆಸರುಗಳು, ಫೋನ್ ಸಂಖ್ಯೆಗಳು, ವಿಳಾಸಗಳು ಮತ್ತು ಛಾಯಾಚಿತ್ರಗಳನ್ನು ಬದಲಾಯಿಸಲು ಆರೋಪಿಗಳು ಕಂಪ್ಯೂಟರ್ ಸಾಫ್ಟ್‌ವೇರ್ ಬಳಸಿದ್ದಾರೆ. ನಂತರ ನಕಲಿ ಕಾರ್ಡ್‌ಗಳನ್ನು ವಿವಿಧ ಸರ್ಕಾರಿ ಇಲಾಖೆಗಳಿಗೆ ನಿಜವಾದ ದಾಖಲೆಗಳಾಗಿ ಪ್ರಸ್ತುತಪಡಿಸಿ ಮತ್ತು ಆರೋಪಿಗಳಿಗೆ ಜಾಮೀನು ಪಡೆಯುವುದು ಸೇರಿದಂತೆ ನ್ಯಾಯಾಲಯದ ವಿಚಾರಣೆಗಳಲ್ಲಿ ಬಳಸಲಾಗಿದೆ ಎಂದು ವರದಿಯಾಗಿದೆ.

Share This Article
Leave a Comment