ಧರ್ಮಸ್ಥಳ ಕೇಸ್: 13ನೇ ಪಾಯಿಂಟ್ ಶೋಧಕ್ಕೆ ‘GPR’ ಮಾಡಲು ‘SIT’ ತೀರ್ಮಾನ

Prakhara News
1 Min Read

ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಸ್ನಾನ ಘಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಶವ ಹೂತಿದ್ದ ಬಗ್ಗೆ ತಪ್ಪೊಪ್ಪಿಗೆಯನ್ನು ದೂರುದಾರನೊಬ್ಬ ನೀಡಿದ್ದರ ಬಗ್ಗೆ ಎಸ್ಐಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂದು 13ನೇ ಪಾಯಿಂಟ್ ನಲ್ಲಿ ಅಸ್ಥಿ ಪಂಜರಗಳ ಶೋಧ ಕಾರ್ಯಾಚರಣೆ ನಡೆಸಬೇಕಾಗಿತ್ತು. ಆದರೇ ಅದನ್ನು ಬಿಟ್ಟು ಎಸ್ಐಟಿ ಅಧಿಕಾರಿಗಳು 15ನೇ ಪಾಯಿಂಟ್ ಒಂದರಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ 13ನೇ ಪಾಯಿಂಟ್ ಅನ್ನು ಜಿಪಿಆರ್ ಮಾಡಲು ಎಸ್ಐಟಿ ತೀರ್ಮಾನಿಸಿದೆ.

ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿವೆ. 6ನೇ ಪಾಯಿಂಟ್ ನಲ್ಲಿ ಕೆಲ ಅಸ್ಥಿಪಂಜರದ ಮೂಳೆಗಳು ದೊರೆತಿದ್ದರೇ, ಆ ಬಳಿಕ ಇತರೆ ಪಾಯಿಂಟ್ ಗಳಲ್ಲಿ ದೊರೆತಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದರ ನಡುವೆ ಕಾಡಿನಲ್ಲಿಯೂ ಶೋಧ ಕಾರ್ಯಾಚರಣೆಯನ್ನು ದೂರುದಾರನ ಮಾಹಿತಿ ಅನುಸಾರವಾಗಿ ಎಸ್ಐಟಿ ಅಧಿಕಾರಿಗಳು ಅಸ್ಥಿ ಪಂಜರಗಳಿಗಾಗಿ ಹುಡುಕಾಟ ನಡೆಸಿದಾಗ ದೊರೆತಿರಲಿಲ್ಲ ಎನ್ನಲಾಗುತ್ತಿದೆ.

ಈ ಎಲ್ಲದರ ನಡುವೆ ಇಂದು 13ನೇ ಪಾಯಿಂಟ್ ನಲ್ಲಿ ಅಗೆಯುವ ಕಾರ್ಯಾಚರಣೆ ನಡೆಸಬೇಕಿತ್ತು. ಆದರೇ ಎಸ್ಐಟಿ ಈ ಪಾಯಿಂಟ್ ಬಿಟ್ಟು ಹೊಸದಾಗಿ 15ನೇ ಪಾಯಿಂಟ್ ಗುರುತಿಸಿದ್ದು, ಅದರಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದು ಹಲವು ಕುತೂಹಲಕ್ಕೂ ಕಾರಣವಾಗಿದೆ. ಆ ಸ್ಥಳದಲ್ಲಿ ಅಸ್ಥಿ ಪಂಜರಗಳು ದೊರೆಯಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದೆಲ್ಲದರ ನಡುವೆ ನಿನ್ನೆ ಎಸ್ಐಟಿ ಅಧಿಕಾರಿಗಳು ಮಹತ್ವದ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ಜಿಪಿಆರ್ ತಂತ್ರಜ್ಞಾನ ಬಳಕೆಯ ಬಗ್ಗೆಯೂ ಚರ್ಚಿಸಲಾಗಿತ್ತು. ಅಂತಿಮವಾಗಿ 13ನೇ ಪಾಯಿಂಟ್ ಅನ್ನು ಜಿಪಿಆರ್ ಬಳಸಿ ಶೋಧ ಕಾರ್ಯಾಚರಣೆ ಮಾಡಲು ಎಸ್ಐಟಿ ತೀರ್ಮಾನಿಸಿದೆ ಎಂಬುದಾಗಿ ತಿಳಿದು ಬಂದಿದೆ.

Share This Article
Leave a Comment