ಮಂಗಳೂರು: ಇಡೀ ದೇಶದಲ್ಲೇ ಸಂಚಲನ ಮೂಡಿಸಿರುವ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆಂದು ಎಂದು ಹೇಳಿಕೆ ನೀಡಿದ್ದ ಅನಾಮಧೇಯ ವ್ಯಕ್ತಿಯನ್ನು ಇಂದು ಎಸ್‌ಐಟಿ ತಂಡದ ಅಧಿಕಾರಿಗಳು ಮಂಗಳೂರಿನಲ್ಲಿ ಸುದೀರ್ಘ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.


ನಗರದ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್‌ಐಟಿ ತಂಡದ ಡಿಐಜಿ ಎಂ.ಎನ್ ಅನುಚೇತ್ ಮತ್ತು ಎಸ್ಪಿ ಜಿತೇಂದ್ರ ದಯಾಮ ಅವರು ವಿಚಾರಣೆ ನಡೆಸಿದ್ದಾರೆ. ಶನಿವಾರ ಬೆಳಗ್ಗೆ 10.30ರ ವೇಳೆಗೆ ತನ್ನ ವಕೀಲರ ಜೊತೆಗೆ ಟ್ಯಾಕ್ಸಿ ಕಾರಿನಲ್ಲಿ ಮುಸುಕು ಹಾಕ್ಕೊಂಡಿದ್ದ ವ್ಯಕ್ತಿ ವಿಚಾರಣೆಗೆ ಬಂದಿದ್ದು, ಮುಸುಕು ಹಾಕ್ಕೊಂಡೇ ಐಬಿ ಬಂಗಲೆಯ ಒಳಗಡೆ ತೆರಳಿದ್ದಾರೆ.
ಸಂಜೆ 7.30ರ ವೇಳೆಗೆ ಮುಸುಕುಧಾರಿ ವ್ಯಕ್ತಿ ಮತ್ತು ಆತನ ಜೊತೆಗಿದ್ದ ವಕೀಲರು ವಿಚಾರಣೆ ಮುಗಿಸಿ ಹಿಂದಕ್ಕೆ ತೆರಳಿದ್ದಾರೆ. ಅಂದಾಜು ಸುದೀರ್ಘ 9 ಗಂಟೆ ಕಾಲ ವಿಚಾರಣೆ ನಡೆಸಿದ್ದು, ಹೆಣಗಳನ್ನು ಹೂತು ಹಾಕಿದ್ದು, ಅದಕ್ಕೆ ಕಾರಣವಾದ ಅಂಶಗಳು, ಯಾವಾಗೆಲ್ಲ ಹೆಣಗಳನ್ನು ಹೂಳಲಾಗಿತ್ತು, ಅದು ಯಾರದ್ದಿತ್ತು ಇತ್ಯಾದಿ ವಿಚಾರಗಳ ಕುರಿತು ವಿಚಾರಣೆ ವೇಳೆ ಮಾಹಿತಿಗಳನ್ನು ಸಂಗ್ರಹಿಸಿರುವ ಸಾಧ್ಯತೆಯಿದೆ.
