ಮಂಗಳೂರು: ಪ್ರಾರ್ಥನಾ ಕ್ರಿಯೇಷನ್ಸ್ ಮಂಗಳೂರು ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಕರಾವಳಿಯ ಆರಾಧ್ಯ ದೈವದ ಕಥಾಹಂದರ ಹೊಂದಿರುವ ಬಹುಭಾಷೆಯ ‘ಕೊರಗ್ಲಾ ತನಿಯಾ’ (ಕೊರಗಜ್ಜ) ಹಾಗೂ ತುಳು ಚಲನಚಿತ್ರ ‘ಕನ’ ಚಿತ್ರಗಳ ಮುಹೂರ್ತ ಸಮಾರಂಭವು ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನೆರವೇರಿತು.


ಈ ವಿಶೇಷ ಸಮಾರಂಭದಲ್ಲಿ ಖ್ಯಾತ ಉದ್ಯಮಿ ಎ.ಜೆ. ಶೆಟ್ಟಿ ಮತ್ತು ಹಿರಿಯ ನಟ ಸುಮನ್ ತಲ್ವಾರ್ ಅವರು ಜಂಟಿಯಾಗಿ ಕ್ಯಾಮರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಜನತಾದಳದ ಶಾಸಕ ಸುರೇಶ್ ಬಾಬು ಚಿತ್ರದ ಆರಂಭದ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕರಾವಳಿಯ ಸಂಸ್ಕೃತಿ ಮತ್ತು ದೈವಾರಾಧನೆಯ ಹಿನ್ನೆಲೆಯನ್ನು ಒಳಗೊಂಡಿರುವ ಈ ಎರಡು ಚಿತ್ರಕ್ಕೆ ಗಣ್ಯರು ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಬಹುಭಾಷಾ “ಕೊರಗ್ಲಾ ತನಿಯಾ” ಸಿನಿಮಾಕ್ಕೆ ಡಾ ಆರ್ ಧನರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ಮಾಡಲಿದ್ದಾರೆ.
“ಕನ” ತುಳು ಸಿನಿಮಾಕ್ಕೆ ವಿಶ್ವನಾಥ್ ಕೋಡಿಕಲ್ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಲಿದ್ದಾರೆ. ಅರ್ಚನ ಶೆಟ್ಟಿ ಎರಡೂ ಸಿನಿಮಾಗಳ ಸಹ ನಿರ್ಮಾಪಕಿಯಾಗಿದ್ದಾರೆ.




