ಮಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಕಳೆದ ಒಂಬತ್ತು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಕುಖ್ಯಾತ ರೌಡಿಶೀಟರ್ನ ಸಹಚರನನ್ನು ಮಂಗಳೂರು ನಗರ ಅಪರಾಧ ಪತ್ತೆ ದಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುಂದಿನ ತನಿಖೆಗಾಗಿ ಸುರತ್ಕಲ್ ಪೊಲೀಸರಿಗೆ ಒಪ್ಪಿಸಲಾಗಿದೆ.


ಬಂಧಿತನನ್ನು ಬಳ್ಳಾರಿ ಮೂಲದ ಸೂಫೀಯಾನ್ ಹುಸೇನ್ ಅಲಿಯಾಸ್ ಕೊಟ್ರೇಶಿ (31) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಶ್ಯಾಮ್ ಪುರದ ಬೇಕರಿ ಸಮೀಪ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಫೀಯಾನ್ ಕಳೆದ ಹಲವು ವರ್ಷಗಳಿಂದ ಕಲಬುರಗಿ, ಬಳ್ಳಾರಿ, ಮುಂಬೈ ಮತ್ತು ಆಂಧ್ರಪ್ರದೇಶದಾದ್ಯಂತ ಅಲೆದಾಡಿ ಅಂತಿಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ. ಈ ಅವಧಿಯಲ್ಲಿ ತನ್ನ ಹೆಸರನ್ನು ‘ಹುಸೇನ್’ ಎಂದು ಬದಲಾಯಿಸಿಕೊಂಡಿದ್ದ ಆತ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಮತ್ತು ಚಾಲನಾ ಪರವಾನಗಿಯಂತಹ ಅಧಿಕೃತ ದಾಖಲೆಗಳನ್ನು ಪಡೆದಿದ್ದಲ್ಲದೆ, ಸ್ಥಳೀಯ ಮಹಿಳೆಯೊಬ್ಬರನ್ನು ಮದುವೆಯಾಗಿ ಹೊಸ ಗುರುತಿನೊಂದಿಗೆ ಜೀವನ ನಡೆಸುತ್ತಿದ್ದ.

ವೃದ್ಧೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಕಳವು ಮಾಡಿ ಆಕೆಯನ್ನು ಕೊಲೆಗೈದ ಪ್ರಕರಣದಲ್ಲಿ ಈತ ಈ ಹಿಂದೆ ಜೈಲು ಪಾಲಾಗಿದ್ದ. ಜೈಲಿನಲ್ಲಿದ್ದಾಗ ತನ್ನನ್ನು ಸೂಫೀಯಾನ್ ಎಂದು ಪರಿಚಯಿಸಿಕೊಂಡಿದ್ದ ಈತ, ನಂತರ ಕುಖ್ಯಾತ ರೌಡಿಶೀಟರ್ ಸಫ್ವಾನ್ ಹುಸೈನ್ ಗ್ಯಾಂಗ್ ಸೇರಿಕೊಂಡಿದ್ದನು.
“ಖಚಿತ ಮಾಹಿತಿಯ ಆಧಾರದ ಮೇಲೆ ನಮ್ಮ ತಂಡ ಬೆಂಗಳೂರಿನ ಡಿ.ಜೆ. ಹಳ್ಳಿಯ ರೈಲ್ವೆ ಗೇಟ್ ಬಳಿಯ ಶಾಮ್ ಪುರದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಯಶಸ್ವಿಯಾಗಿ ಬಂಧಿಸಿದೆ” ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೂಫೀಯಾನ್ ವಿರುದ್ಧ ಸುರತ್ಕಲ್, ಬಜ್ಪೆ, ಬಳ್ಳಾರಿ ಮತ್ತು ಹೊಸಪೇಟೆ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕಳ್ಳತನ ಮತ್ತು ದರೋಡೆ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಈತನನ್ನು ಹೆಚ್ಚಿನ ವಿಚಾರಣೆಗಾಗಿ ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.



