ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ದೂರು ನೀಡಿದ ವ್ಯಕ್ತಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಎಸ್‌ಐಟಿ ತನಿಖಾ ತಂಡದ ಇನ್ಸ್‌ಪೆಕ್ಟರ್ ಒಬ್ಬರು ದೂರು ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ದೂರುದಾರರು ವಕೀಲರ ಮೂಲಕ ತಿಳಿಸಿದ್ದಾರೆ.


ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಶವಗಳನ್ನು ನಾನು ಕಾಡಿನಲ್ಲಿ ಹೂತಿದ್ದೇನೆ. ಅದರಲ್ಲಿ ಕೆಲವು ಶವಗಳ ಬಟ್ಟೆಗಳು ಅಸ್ತವ್ಯಸ್ತವಾಗಿದ್ದರೆ, ಕೆಲವು ಮಹಿಳಾ ಶವಗಳಿಗೆ ಒಳ ಉಡುಪು ಇರಲಿಲ್ಲ ಎಂದು ಆರೋಪ ಮಾಡಿದ್ದನು. ನಾನು ಶವ ಹೂಳಿದ ಸ್ಥಳಗಳನ್ನು ತೋರಿಸುವುದಾಗಿ ಅನಾಮಿಕ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದನು. ಇದರ ತನಿಖೆಗೆ ಸರ್ಕಾರದಿಂದ 24 ಜನರ ವಿಶೇಷ ತನಿಖಾ ತಂಡವೊಂದನ್ನು ರಚನೆ ಮಾಡಿದೆ. ಈ ಎಸ್‌ಐಟಿ ತಂಡವು ಕಳೆದೊಂದು ವಾರದಿಂದ ಅನಾಮಿಕ ದೂರುದಾರ ವ್ಯಕ್ತಿಯೊಂದಿಗೆ ಶವ ಹೂಳಿದ ಸ್ಥಳಗಳನ್ನು ಗುರುತು ಮಾಡಿ, ಸಮಾಧಿ ಅಗೆಯುವ ಕೆಲಸ ಮಾಡುತ್ತಿದೆ. ಈವರೆಗೆ ನಾಲ್ಕೈದು ದಿನದಲ್ಲಿ 13 ಸಮಾಧಿಗಳನ್ನು ಗುರುತಿಸಿ, 8 ಗುಂಡಿಗಳನ್ನು ಅಗೆಯಲಾಗಿದೆ. ಒಂದು ಸಮಾಧಿಯಲ್ಲಿ ಮಾತ್ರ ಮೂಳೆ ಲಭ್ಯವಾಗಿದೆ.
ಇದೀಗ ಎಸ್‌ಐಟಿ ತಂಡದಲ್ಲಿರುವ ಅಧಿಕಾರಿ (ಪೊಲೀಸ್ ಇನ್ಸ್‌ಪೆಕ್ಟರ್) ಈ ಕೇಸಿನಲ್ಲಿ ನಿನಗೆ ಶಿಕ್ಷೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ, ನೀನು ಕೊಟ್ಟಿರುವ ದೂರನ್ನು ವಾಪಸ್ ಪಡೆದುಕೊಳ್ಳುವಂತೆ ದೂರುದಾರನಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಪೊಲೀಸರ ಮುಂದೆ ವಕೀಲರ ಸಹಾಯದ ಮೂಲಕ ಬಂದಿರುವ ಅನಾಮಿಕ ವ್ಯಕ್ತಿ, ಈ ಕೇಸನ್ನು ವಾಪಸ್ ಪಡೆಯುವಂತೆ ಪೊಲೀಸರು ಒತ್ತಡ ಹಾಕುತ್ತಿದ್ದಾರೆ ಎಂದು ವಕೀಲರಿಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ವಕೀಲರು ಎಸ್‌ಐಟಿ ತಂಡದ ಹಿರಿಯ ಅಧಿಕಾರಿಗಳಿಗೆ, ಈ ಬಗ್ಗೆ ಪ್ರಶ್ನೆ ಮಾಡಲಾಗಿದ್ದು, ಇದನ್ನು ಹಿರಿಯ ಅಧಿಕಾರಿಗಳು ಅಲ್ಲಗಳೆದಿದ್ದಾರೆ.
