ಲೈಂಗಿಕವಾಗಿ ಸಹಕರಿಸಲು ನಿರಾಕರಿಸಿದ ಮಂಗಳೂರಿನ ಕಾವೂರು ನಿವಾಸಿ ಟೆಕ್ಕಿ ಶರ್ಮಿಳಾ (35) ಕೊಂದಿದ್ದ 18 ವರ್ಷದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಶರ್ಮಿಳಾ ಕಳೆದ ವಾರ ಬೆಂಗಳೂರಿನ ತಮ್ಮ ಫ್ಲಾಟ್‌ನಲ್ಲಿ ಬೆಂಕಿ ಅವಘಡದಲ್ಲಿ ಮೃತಾಪಟ್ಟಿದ್ದಾರೆ ಎಂದು ಮೊದಲು ಶಂಕಿಸಲಾಗಿತ್ತು.


ಶರ್ಮಿಳಾ ಅವಿವಾಹಿತೆಯಾಗಿದ್ದು ಸುಬ್ರಹ್ಮಣ್ಯ ಲೇಔಟ್‌ನ ಸಂಕಲ್ಪ ನಿಲಯದಲ್ಲಿ ಎರಡು ಬೆಡ್ರೂಮ್ ಫ್ಲಾಟ್‌ನಲ್ಲಿ ವಾಸವಿದ್ದರು. ಬೆಂಗಳೂರಿನ ಪ್ರಮುಖ ಟೆಕ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 3ರ ರಾತ್ರಿ 10.15 ರಿಂದ 10.45ರ ನಡುವೆ ಅವರ ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ, ಶರ್ಮಿಳಾ ಅವರ ಸುಟ್ಟ ದೇಹವನ್ನು ಪತ್ತೆ ಮಾಡಿತ್ತು.
ಶರ್ಮಿಳಾ ರೂಮ್ ಮೇಟ್ 2025ರ ನವೆಂಬರ್ 14ರಿಂದ ಅಸ್ಸಾಂನಲ್ಲಿರುವ ತಮ್ಮ ತವರು ಮನೆಯಲ್ಲಿದ್ದರು, ಮೊದಲು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ, ಶರ್ಮಿಳಾ ಸ್ನೇಹಿತರೊಬ್ಬರು ಇದು ದುರುದ್ದೇಶಪೂರಿತ ಕೃತ್ಯ ಎಂದು ಅನುಮಾನ ವ್ಯಕ್ತಪಡಿಸಿದರು. ಇದರ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡರು.
ಪೊಲೀಸ್ ತನಿಖೆಯಲ್ಲಿ, ಶರ್ಮಿಳಾ ಅವರ ನೆರೆಮನೆಯವನಾದ ಕೇರಳ ಮೂಲದ ಕರ್ಣಲ್ ಕುರೈ (18) ಎಂಬಾತ ರಾತ್ರಿ ಸುಮಾರು 9 ಗಂಟೆಗೆ ಕಿಟಕಿಯ ಮೂಲಕ ಶರ್ಮಿಳಾ ಅವರ ಫ್ಲಾಟ್‌ಗೆ ನುಗ್ಗಿದ್ದ. ಶರ್ಮಿಳಾ ಅವರನ್ನು ಲೈಂಗಿಕವಾಗಿ ಸಹಕರಿಸುವಂತೆ ಕೇಳಿಕೊಂಡಿದ್ದ. ಶರ್ಮಿಳಾ ನಿರಾಕರಿಸಿದಾಗ ಕುರೈ, ಆಕೆಯ ಬಾಯಿ ಮತ್ತು ಮೂಗನ್ನು ಬಿಗಿಯಾಗಿ ಹಿಡಿದು ಆಕೆಯನ್ನು ಅರೆ ಪ್ರಜ್ಞಾವಸ್ಥೆಗೆ ತಂದಿದ್ದಾನೆ. ಈ ವೇಳೆ ನಡೆದ ಜಗಳದಲ್ಲಿ ಅಕೆಗೆ ಗಾಯಗಳಾಗಿ ರಕ್ತಸ್ರಾವ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಸಾಕ್ಷ್ಯಗಳನ್ನು ನಾಶಪಡಿಸಲು ಬೆಂಕಿ ಹಚ್ಚಿ ಆಕೆಯ
ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದ. ಕುರೈ, ಪಿಯುಸಿ ವಿದ್ಯಾರ್ಥಿಯಾಗಿದ್ದು, ತನ್ನ ತಾಯಿಯೊಂದಿಗೆ ವಾಸವಿದ್ದ. ಪೊಲೀಸರು ಆತನನ್ನ ಮನೆಯಲ್ಲಿ ಬಂಧಿಸಿ, ಮೂರು ದಿನಗಳ ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

