ಬೆಳ್ತಂಗಡಿ: ಕೊಕ್ಕಡ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಗ್ರಾಮಸ್ಥರು ತೀವ್ರ ಭೀತಿಯಲ್ಲಿ ದಿನದೂಡುವಂತಾಗಿದೆ. ಕೃಷಿ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದ ಆನೆಗಳು, ಇದೀಗ ಜನವಸತಿ ಪ್ರದೇಶದ ವಾಹನಗಳ ಮೇಲೆಯೂ ದಾಳಿ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.


ಮಾರ್ಚ್ 28ರಂದು ರಾತ್ರಿ ತೆಂಕುಬೈಲು ಪ್ರದೇಶದಲ್ಲಿ ಸಂಚರಿಸಿದ ಕಾಡಾನೆ, ಯಶವಂತ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಸೇರಿದ ಮಾರುತಿ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸಿದೆ. ಅದರ ಬೆನ್ನಲ್ಲೇ ಮಾರ್ಚ್ 29ರಂದು ಮುಂಡೂರುಪಳಿಕೆ ಸಮೀಪದ ಸಂಕುಬೈಲಿನಲ್ಲಿ ಸೇಸಪ್ಪ ಗೌಡ ಅವರಿಗೆ ಸೇರಿದ ದ್ವಿಚಕ್ರ ವಾಹನವನ್ನು ಜಜ್ಜಿದ ಘಟನೆ ವರದಿಯಾಗಿದೆ. ಕೇವಲ ವಾಹನಗಳಷ್ಟೇ ಅಲ್ಲದೆ, ಅಡಿಕೆ, ತೆಂಗು, ಬಾಳೆ ಹಾಗೂ ಭತ್ತದ ಬೆಳೆಗಳಿಗೆ ಆನೆಗಳು ನುಗ್ಗಿ ನಾಶಪಡಿಸುತ್ತಿವೆ. ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಬೆಳೆಗಳು ಒಂದೇ ರಾತ್ರಿಯಲ್ಲಿ ಮಣ್ಣುಪಾಲಾಗುತ್ತಿದ್ದು, ಕೃಷಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯಕ್ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ರೈತರೊಂದಿಗೆ ಮಾತುಕತೆ ನಡೆಸಿದರು. ಸರ್ಕಾರದಿಂದ ದೊರೆಯುವ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಶೀಘ್ರವಾಗಿ ವಿತರಿಸುವ ಭರವಸೆ ನೀಡಿದ್ದಾರೆ.ಆನೆಗಳ ಚಲನವಲನದ ಮೇಲೆ ನಿಗಾ ಇಡಲು ಮತ್ತು ಅವುಗಳನ್ನು ಮರಳಿ ಕಾಡಿಗೆ ಅಟ್ಟಲು ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಸ್ವತಃ ರಾತ್ರಿ ವೇಳೆ ಈ ತಂಡದೊಂದಿಗೆ ಇದ್ದು ಕಾರ್ಯಾಚರಣೆಯ ಮಾರ್ಗದರ್ಶನ ನೀಡುತ್ತಿದ್ದಾರೆ.



