ಬೆಳ್ತಂಗಡಿ:ಜಪ್ತಿ ಮಾಡಿದ 4,175 ಲೀಟರ್ ಅಕ್ರಮ ಡೀಸೆಲ್ ಹರಾಜು – ₹2.35 ಲಕ್ಷಕ್ಕೆ ಮಾರಾಟ

Prakhara News
1 Min Read

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದೆಲ್ತಿಯಾರ್ ಪ್ರದೇಶದ ಮನೆಯ ಮನೆಯ ಶೆಡ್‌ನಲ್ಲಿ ಯಾವುದೇ ಅನುಮತಿ ಪಡೆಯದೆ  ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಡೀಸೆಲ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ನಿಯಮಾನುಸಾರ ಕಂದಾಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಅಂಗಳದಲ್ಲಿ ಪತ್ತೆಯಾದ ಒಟ್ಟು 4,175 ಲೀಟರ್ ಡೀಸೆಲ್ ಅನ್ನು ಮಾರ್ಚ್ 27ರಂದು ಹರಾಜಿಗೆ ಇಡಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಏಳು ಮಂದಿ ಭಾಗವಹಿಸಿದ್ದರು. ಹರಾಜಿನಲ್ಲಿ ಪುತ್ತೂರು ತಾಲೂಕಿನ ಹಿರೆಬಂಡಾಡಿ ನಿವಾಸಿ ನಾರಾಯಣ ಗೌಡ ಅವರು ಪ್ರತಿ ಲೀಟರ್‌ಗೆ ₹60 ದರ ನೀಡುವ ಮೂಲಕ ಒಟ್ಟು ₹2,35,800 ನೀಡಿ ಡೀಸೆಲ್ ಖರೀದಿಸಿದ್ದಾರೆ.

ಮಾರ್ಚ್ 9ರ ಮಧ್ಯರಾತ್ರಿ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ ಅವರ ನೇತೃತ್ವದಲ್ಲಿ ನಡೆದ ದಾಳಿಯ ವೇಳೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಖಚಿತ ಮಾಹಿತಿಯ ಮೇರೆಗೆ ಕಣಿಯೂರು ಗ್ರಾಮದ ಬನಶಂಕರಿ ನಿಲಯದ ಜಗದೀಶ್ (35) ಅವರ ಮನೆಯ ಹಿಂಭಾಗದ ಶೆಡ್ ಮೇಲೆ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಡೀಸೆಲ್ ಅನ್ನು ವಶಪಡಿಸಿಕೊಂಡಿದ್ದರು. ದಾಳಿಯ ವೇಳೆ 20 ಬ್ಯಾರಲ್‌ಗಳಲ್ಲಿ ತಲಾ 200 ಲೀಟರ್ (ಒಟ್ಟು 4,000 ಲೀಟರ್) ಹಾಗೂ 5 ಕ್ಯಾನ್‌ಗಳಲ್ಲಿ ತಲಾ 35 ಲೀಟರ್ (ಒಟ್ಟು 175 ಲೀಟರ್) ಸೇರಿ ಒಟ್ಟು 4,175 ಲೀಟರ್ ಡೀಸೆಲ್ ಮತ್ತು 5 ಖಾಲಿ ಕ್ಯಾನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಇಂಧನದ ಮೌಲ್ಯ ಸುಮಾರು ₹3.50 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಜಗದೀಶ್ ಹಾಗೂ ಹರೀಶ್ ವಿರುದ್ಧ ಮಾ.10ರಂದು ಪ್ರಕರಣ ದಾಖಲಾಗಿದ್ದು, BNS ಕಲಂ 287, ಅತ್ಯಾವಶ್ಯಕ ವಸ್ತುಗಳ ಕಾಯ್ದೆ ಕಲಂ 3 ಮತ್ತು 7, ಹಾಗೂ ಪೆಟ್ರೋಲಿಯಂ ಕಾಯ್ದೆ ಕಲಂ 23 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಆಹಾರ ಇಲಾಖೆಯ ಶಿರಸ್ತೇದಾರ ಸಂತೋಷ್ ಜಿ, ಆಹಾರ ನಿರೀಕ್ಷಕ ವಿಶ್ವ ಕೆ, ಸಿಬ್ಬಂದಿ ಹರೀಶ್ ಕೆ, ಉಪ್ಪಿನಂಗಡಿ ಸಬ್‌ಇನ್ಸ್‌ಪೆಕ್ಟರ್ ಸುತೇಶ್ ಹಾಗೂ ಇತರರು ಉಪಸ್ಥಿತರಿದ್ದರು.

Share This Article
Leave a Comment