ಬಾಂಗ್ಲಾದೇಶ : ಗ್ಯಾರೇಜ್‌ನಲ್ಲಿ ನಿದ್ರಿಸುತ್ತಿದ್ದ ವೇಳೆ ಹಿಂದೂ ಯುವಕನ ಬೆಂಕಿ ಹಚ್ಚಿ ಕೊಲೆ..!

Prakhara News
1 Min Read

ಢಾಕಾ : ಬಾಂಗ್ಲಾದೇಶದ ರಾಜಧಾನಿ ಢಾಕಾ ಸಮೀಪದ ನರಸಿಂಗ್ಡಿ ನಗರದಲ್ಲಿ 23 ವರ್ಷದ ಹಿಂದೂ ಯುವಕನನ್ನು ಮಲಗಿದ್ದಾಗ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ನಡೆದಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಯುತ್ತಿರುವ ನಡುವೆಯೇ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಢಾಕಾದಿಂದ ಕೇವಲ 50 ಕಿ.ಮೀ ದೂರದಲ್ಲಿರುವ ನರಸಿಂಗ್ಡಿ ನಗರದ ಕುಮಿಲ್ಲಾ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದ ಖೋಕನ್ ಚಂದ್ರ ಭೌಮಿಕ್ ಅವರ ಪುತ್ರ 23 ವರ್ಷ ಪ್ರಾಯದ ಚಂಚಲ್ ಚಂದ್ರ ಭೌಮಿಕ್ ನನ್ನು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ.

ಚಂಚಲ್ ಚಂದ್ರ ಭೌಮಿಕ್ ಅವರು ನರಸಿಂಗಡಿ ಪೊಲೀಸ್ ಲೈನ್ಸ್‌ನ ಖಾನಬರಿ ಮಸೀದಿ ಮಾರುಕಟ್ಟೆ ಪ್ರದೇಶದ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಶುಕ್ರವಾರ ತಡರಾತ್ರಿ, ಕೆಲಸ ಮುಗಿಸಿ ದಣಿದ ಕಾರಣ ಗ್ಯಾರೇಜ್ ಒಳಗೆ ನಿದ್ರೆಗೆ ಜಾರಿದರು. ಅವರು ಮಲಗಿದ್ದಾಗ ಕಿಡಿಗೇಡಿಗಳು ಶಟರ್‌ ಹೊರಗಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ,ಒಳಗೆ ಹೆಚ್ಚಿನ ಪ್ರಮಾಣದ ಪೆಟ್ರೋಲ್, ಎಂಜಿನ್ ಎಣ್ಣೆ ಮತ್ತು ಇತರ ಸುಡುವ ವಸ್ತುಗಳು ಇದ್ದುದರಿಂದ, ಬೆಂಕಿ ಬೇಗನೆ ಗ್ಯಾರೇಜ್‌ನಾದ್ಯಂತ ಹರಡಿತು.

ನಿದ್ರಿಸುತ್ತಿದ್ದ ಭೌಮಿಕ್ ಉಸಿರುಗಟ್ಟುವಿಕೆ ಮತ್ತು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದು, ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ಇದನ್ನು ಯೋಜಿತ ಕೊಲೆ ಎಂದು ಹೇಳಿದ್ದಾರೆ. ದಾಳಿಕೋರರು ಗ್ಯಾರೇಜ್‌ಗೆ ಬೆಂಕಿ ಹಚ್ಚುತ್ತಿರುವುದು ಹತ್ತಿರದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಂಡುಬಂದಿದೆ ಆದರೆ ಇನ್ನೂ ಆರೋಪಿಗಳನ್ನು ಗುರುತಿಸಲಾಗಿಲ್ಲ.ಕಳೆದ ಆರು ವರ್ಷಗಳಿಂದ ಭೌಮಿಕ್ ಅವರು ರುಬೆಲ್ ಮಿಯಾ ಅವರ ಗ್ಯಾರೇಜ್‌ನಲ್ಲಿ ಕೆಲಸ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು.

ಮೃತ ಚಂಚಲ್ ತನ್ನ ಕುಟುಂಬದ ಏಕೈಕ ಆಧಾರವಾಗಿದ್ದ, ಅನಾರೋಗ್ಯ ಪೀಡಿತ ತಾಯಿ, ಅಂಗವಿಕಲ ಅಣ್ಣನ ಜವಾಬ್ದಾರಿ ಇವರ ಮೇಲಿತ್ತು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಅಪರಾಧಿಗಳನ್ನು ಗುರುತಿಸಲು ಮತ್ತು ಬಂಧಿಸಲು ಹಲವಾರು ಪೊಲೀಸ್ ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment