ವಿವಾಹಿತ ಮಹಿಳೆಗೆ ಅಶ್ಲೀಲ ವಿಡಿಯೋ ಕಳುಹಿಸಿದವನ ಹತ್ಯೆ: ರೇಣುಕಾಸ್ವಾಮಿ ಹತ್ಯೆಯಂತೆ ಮತ್ತೊಂದು ಪ್ರಕರಣ

Prakhara News
2 Min Read

ಬಳ್ಳಾರಿ: ರಾಜ್ಯವನ್ನೇ ತಲ್ಲಣಗೊಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಹೋಲುವಂತಹ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಮಹಿಳೆಗೆ ವಿಡಿಯೋ ಕಳಿಸಿ ತನ್ನ ಜೊತೆ ಸಹಕರಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಸಂಬಂಧಿಕರೇ ಹಗ್ಗದಿಂದ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಬಳ್ಳಾರಿಯಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಖಾಸಗಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಬಸವನಗೌಡ ಪಾಟೀಲ್ (26) ಅಂತ ಗುರುತಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾದ ದೊಡ್ಡ ಬಸವನಗೌಡ, ಆತನ ಪತ್ನಿ ಶ್ವೇತಾ ಹಾಗೂ ಆಕೆಯ ಸಹೋದರ ವಿಜಯ್​ನನ್ನು ಬಂಧಿಸಿ, ತನಿಖೆ ಮುಂದುವರೆಸಲಾಗಿದೆ.

ಘಟನೆ ವಿವರ: ಜೂನ್ 7ರಂದು ರಾತ್ರಿ ಬಸವನಗೌಡ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಮರುದಿನ ಬೆಳಗ್ಗೆ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ-ತಂಬ್ರಹಳ್ಳಿ ಎಲ್‌ಎಲ್‌ಸಿ ಕಾಲುವೆಯ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆರಂಭದಲ್ಲಿ ಇದೊಂದು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಸತ್ಯ ಹೊರಬಂದಿದ್ದು, ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ.

ಪೊಲೀಸರ ತನಿಖೆಯ ಪ್ರಕಾರ, ಮೃತ ಬಸವನಗೌಡ ವಿವಾಹಿತ ಮಹಿಳೆ ಶ್ವೇತಾಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ, ತನ್ನ ಜೊತೆ ಸಹಕರಿಸುವಂತೆ ಮಾನಸಿಕ ಕಿರುಕುಳ ನೀಡಿ ನಿರಂತರವಾಗಿ ಪೀಡಿಸುತ್ತಿದ್ದ. ಬಸವನಗೌಡನ ವರ್ತನೆಯಿಂದ ಬೇಸತ್ತ ಮಹಿಳೆ, ಈ ವಿಷಯವನ್ನು ತನ್ನ ಪತಿ ದೊಡ್ಡ ಬಸವನಗೌಡ ಮತ್ತು ಸಹೋದರ ವಿಜಯ್‌ಗೆ ತಿಳಿಸಿದ್ದಾಳೆ. ಇದರಿಂದ ಯುವಕನನ್ನು ಕೊಲೆ ಮಾಡಲು ಮೂವರೂ ಸೇರಿ ಪ್ಲಾನ್​ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬೆಂಗಳೂರಿಗೆ ಪರಾರಿ: ಯೋಜನೆಯಂತೆ ಜೂನ್ 7ರಂದು ಮಹಿಳೆಯಿಂದಲೇ ಬಸವನಗೌಡನನ್ನು ಮೋಕಾ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆಸಿಕೊಳ್ಳಲಾಗಿತ್ತು. ಬಸವನಗೌಡ ಅಲ್ಲಿಗೆ ಬರುತ್ತಿದ್ದಂತೆ ಮೊದಲೇ ಹೊಂಚು ಹಾಕಿ ಕಾದಿದ್ದ ಮಹಿಳೆಯ ಪತಿ ದೊಡ್ಡ ಬಸವನಗೌಡ ಮತ್ತು ಆಕೆಯ ಸಹೋದರ ವಿಜಯ್ ಇಬ್ಬರೂ ಸೇರಿ ಹಗ್ಗದಿಂದ ಕುತ್ತಿಗೆ ಬಿಗಿದು ಆತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಶವ ಸಿಗಬಾರದೆಂದು ಅಲ್ಲಿಂದ ಸುಮಾರು 10 ಕಿಲೋಮೀಟರ್ ದೂರದ ನಿರ್ಜನ ಪ್ರದೇಶಕ್ಕೆ ಸಾಗಿಸಿ, ಬೆಂಕಿ ಹಚ್ಚಿ ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಕೃತ್ಯದ ಬಳಿಕ ಮೂವರೂ ಬೆಂಗಳೂರಿಗೆ ಓಡಿಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಬಸವನಗೌಡ ಮೊಬೈಲ್​​ ಪರಿಶೀಲಿಸಿದಾಗ ಆತ ಹಲವು ಮಹಿಳೆಯರಿಗೆ ಅಸಭ್ಯ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ನಿರಂತರವಾಗಿ ಯಾರಿಗೆ ಸಂದೇಶ ಹೋಗಿತ್ತು ಎಂಬುದನ್ನು ಟ್ರ‍್ಯಾಕ್ ಮಾಡಿ, ಮೊಬೈಲ್ ಲೊಕೇಶನ್ ಮತ್ತು ಕಾಲ್ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ವೇಳೆ ಆರೋಪಿಗಳು ತಾವೇ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಎಸ್ಪಿ ಹೇಳಿದ್ದೇನು? : ಪ್ರಕರಣ ಕುರಿತು ಮಾಹಿತಿ ನೀಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್, “ಮೃತ ಯುವಕ ಮಹಿಳೆಗೆ ವಿಡಿಯೋ ಕಳುಹಿಸಿ ತನ್ನೊಂದಿಗೆ ಸಹಕರಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ. ಮಹಿಳೆ ಈ ವಿಚಾರವನ್ನು ತನ್ನ ಪತಿ ಹಾಗೂ ಸಹೋದರನಿಗೆ ತಿಳಿಸಿದ್ದಳು. ಕಿರುಕುಳ ಮುಂದುವರಿದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಮಹಿಳೆಯಿಂದ ಕರೆ ಮಾಡಿಸಿ ಶಿವಪುರ-ತಂಬ್ರಹಳ್ಳಿ ಕಾಲುವೆ ಸಮೀಪಕ್ಕೆ ಕರೆಯಿಸಿಕೊಂಡು ಹಗ್ಗದಿಂದ ಕೊಲೆ ಮಾಡಲಾಗಿದೆ. ಕಾರಿನಲ್ಲೇ ಹಗ್ಗ ಹಾಗೂ ಪೆಟ್ರೋಲ್ ತಂದಿದ್ದು, ಕೊಲೆ ಬಳಿಕ ಶವಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಬೆಂಗಳೂರಿಗೆ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

Share This Article
Leave a Comment