ಪುತ್ತೂರು: ದೀಪಾವಳಿ ಪ್ರಯುಕ್ತ ರೈ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತೀ ವರ್ಷ ನಡೆಸಲಾಗುತ್ತಿರುವ `ಅಶೋಕಾ-ಜನಮನ’ ಕಾರ್ಯಕ್ರಮ ಅ.20ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. 13ನೇ ವರ್ಷದ ಈ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.


ಈ ಬಾರಿ ಸೀರೆ -ಬೆಡ್ ಶೀಟ್ ಬದಲಿಗೆ ಮನೆಗೆ ಬಹು ಉಪಯೋಗಿಯಾಗುವ ಸ್ಟೀಲ್ ತಟ್ಟೆ, ಪಿಂಗಾಣಿ, ಗ್ಲಾಸ್, ಬೌಲ್ ಹಾಗೂ ಟವೆಲ್ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ 1 ಲಕ್ಷ ಮಂದಿ ಭಾಗವಹಿಸಲಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ದೀಪಾವಳಿಯ ಪ್ರಯುಕ್ತ ಈ ಹಿಂದೆ ಸಾಂಪ್ರದಾಯಿಕವಾಗಿ ಸೀರೆ ಹಾಗೂ ಬೆಡ್ ಶೀಟ್ ನೀಡಲಾಗುತ್ತಿತ್ತು. ಈ ಬಾರಿ ಜನತೆಯ ಅಭಿಪ್ರಾಯದಂತೆ ಚಿಕ್ಕ ಬದಲಾವಣೆ ಮಾಡಿದ್ದೇವೆ. ಮನೆಗೆ ಅಗತ್ಯವಾದ ವಸ್ತುಗಳನ್ನು ನೀಡುವ ಚಿಂತನೆ ಮಾಡಲಾಗಿದೆ. ಕಳೆದ ವರ್ಷ 85650 ಮಂದಿಗೆ ಸೀರೆ ವಿತರಣೆ ಮಾಡಲಾಗಿತ್ತು. ಈ ಬಾರಿ ಭಾಗವಹಿಸುವ ಮಕ್ಕಳಿಗೂ ವಿತರಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಕಾರ್ಯಕ್ರಮ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದ್ದು, ಸಂಜೆ 5 ಗಂಟೆ ತನಕವೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ.ಖಾದರ್ ಸಹಿತ ಹಲವು ಸಚಿವರು ಭಾಗಿಯಾಗಲಿದ್ದಾರೆ. ಇದು ಕಾಂಗ್ರೇಸ್ ಪಕ್ಷದ ಕಾರ್ಯಕ್ರಮ ಅಲ್ಲ. ಪಕ್ಷಾತೀತವಾದ ಕಾರ್ಯಕ್ರಮವಾಗಿದೆ. ಇದರಲ್ಲಿ ಜಾತಿ-ಮತ ಇಲ್ಲದೆ ಎಲ್ಲರೂ ಭಾಗವಹಿಸುವಂತೆ ಅವರು ವಿನಂತಿಸಿದರು. ಜಿಲ್ಲೆಯ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಮಹಾಲಿಂಗೇಶ್ವರ ದೇವಳದ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಇಲ್ಲಿಂದ ಅಟೊರಿಕ್ಷಾಗಳು ಪ್ರಯಾಣಿಕರನ್ನು ಕಾರ್ಯಕ್ರಮ ನಡೆಯುವಲ್ಲಿಗೆ ಉಚಿತವಾಗಿ ಕರೆತರಲಿದ್ದಾರೆ. ಇದು ರಿಕ್ಷಾ ಚಾಲಕರ ಉಚಿತ ಸೇವೆಯಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 1 ಸಾವಿರ ಸ್ವಯಂಸೇವಕರು ಸುವ್ಯವಸ್ಥೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ದೀಪಾವಳಿಯಲ್ಲಿ ಉದ್ದಿನ ದೋಸೆ ಸ್ಪೆಷಲ್. ಹಾಗಾಗಿ ಈ ಬಾರಿ ಸುಮಾರು 50 ಮಂದಿ ಸ್ಳಳದಲ್ಲಿಯೇ ದೋಸೆ ತಯಾರಿಸಿ ನೀಡಲಿದ್ದಾರೆ. ಸುಮಾರು 80 ಸಾವಿರ ದೋಸೆಗಳು ತಯಾರಾಗಲಿವೆ. ಸಂಜೆ 3 ಗಂಟೆ ನಂತರ ಈ ದೋಸೆಮೇಳ ನಡೆಯಲಿದೆ. 1 ಲಕ್ಷ ಮಂದಿಗೆ ಅನ್ನದಾನ ನಡೆಯಲಿದೆ ಎಂದವರು ತಿಳಿಸಿದರು.
ಗೂಡು ದೀಪ ಸ್ಪರ್ಧೆ
ಪ್ರತೀ ವರ್ಷದಂತೆ ಈ ಬಾರಿಯೂ ಗೂಡುದೀಪ ಸ್ಪರ್ಧೆ ನಡೆಯಲಿದೆ. ಸೀನಿಯರ್ ಹಾಗೂ ಜೂನಿಯರ್ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಸೀನಿಯರ್ ವಿಭಾಗಕ್ಕೆ ಪ್ರಥಮ ಬಹುಮಾನ ರೂ 7500, ಜೂನಿಯರ್ ವಿಭಾಗದಲ್ಲಿ ಪ್ರಥಮಸ್ಥಾನಕ್ಕೆ ರೂ.5000 ನೀಡಲಾಗುವುದು. ಉಳಿದಂತೆ ದ್ವಿತೀಯಸ್ಥಾನಿಗಳಿಗೆ 2500 ಬಹುಮಾನ ನೀಡಲಾಗುವುದು.
ಬಡ ಸೇವಾಸಕ್ತರಿಗೆ ಸನ್ಮಾನ
ಸಂಕಷ್ಟದಲ್ಲಿರುವ ತಾಯಿಯ ಸೇವೆ ಮಾಡಿದವರಿಗೆ, ಹಾಲು ಮಾರಾಟ ಮಾಡಿ ಮನೆ ನಡೆಸುವವರಿಗೆ, ಬೀಡಿಕಟ್ಟಿ ಜೀವನ ಸಾಗಿಸುವಂತಹ ಬಡವರಿಗೆ ಸನ್ಮಾನ ಮಾಡಲಾಗುವುದು. ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ 20 ಮಂದಿಗೆ ಈ ಸನ್ಮಾನ ನಡೆಯಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಸ್ಯರಾದ ಜಯಪ್ರಕಾಶ್ ಬದಿನಾರ್ ಹಾಗೂ ನಿಹಾಲ್ ಶೆಟ್ಟಿ ಉಪಸ್ಥಿತರಿದ್ದರು.
