ಬಂಟ್ವಾಳ : ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖಾಸಗಿ ಗೋದಾಮಿನಲ್ಲಿ ಅಕ್ರಮ ದಾಸ್ತಾನಿರಿಸಲಾಗಿದ್ದ ಸ್ಥಳಕ್ಕೆ ಆಹಾರ ಇಲಾಖಾಧಿಕಾರಿಗಳು ಶನಿವಾರ ದಾಳಿ ನಡೆಸಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಬಂಟ್ವಾಳದ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಪಟ್ಟೆಕೋಡಿ ಎಂಬಲ್ಲಿ ಗೋದಾಮಿನಲ್ಲಿ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಪ್ರಕರಣಕ್ಕೆ ಸಂಬಂದಿಸಿ ಕಲ್ಲಡ್ಕ ನಿವಾಸಿಗಳಾದ ಗೋದಾಮು ನಿರ್ವಾಹಕ ಉಮ್ಮರಬ್ಬ ಯಾನೆ ಪುತ್ತುಮೋನು (47) ಹಾಗೂ ಕೆಲಸಗಾರ ರಫೀಕ್ (42) ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಬಂಟ್ವಾಳ ನಗರ ಪೊಲೀಸರ ಜೊತೆಗೂಡಿ ಈ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಸುಮಾರು 25 ಕ್ವಿಂಟಾಲ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಅನ್ನಭಾಗ್ಯ ಯೋಜನೆಯ 21.4 ಕ್ವಿಂಟಾಲ್ ಬೆಳ್ತಿಗೆ ಅಕ್ಕಿ ಹಾಗೂ 4.67 ಕ್ವಿಂಟಾಲ್ ಕುಚ್ಚಲು ಅಕ್ಕಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ ತೂಕದ ಮಾಪನ, ಮತ್ತು ಅಕ್ಕಿ ಸಾಗಾಟಕ್ಕೆಂದು ತಂದ ಅಟೋ ರಿಕ್ಷಾವನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.
