ಉಡುಪಿ: ಸೈಫುದ್ದೀನ್ ಕೊಲೆ ಪ್ರಕರಣ- ಮೂವರು ಆರೋಪಿಗಳು ವಶಕ್ಕೆ

Prakhara News
1 Min Read

ಉಡುಪಿ: ಯಾವುದೋ ವ್ಯವಹಾರದ ಕಾರಣಕ್ಕಾಗಿ ಸಹಚರರೇ ಸೇರಿಕೊಂಡು ಎಕೆಎಂಎಸ್ ಬಸ್ ಮಾಲೀಕ ಸೈಪುದ್ದೀನ್ ನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಮಣಿಪಾಲದಿಂದ ಕೊಡವೂರಿಗೆ ಒಂದೇ ಕಾರಿನಲ್ಲಿ ತೆರಳಿದ್ದ ಮೂವರು ಸಹಚರರು, ಸೈಫುದ್ದೀನ್ ತನ್ನ ಕೊಡವೂರಿನ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಹಿಂದಿನಿಂದ ಚೂರಿ ಹಾಗೂ ತಲವಾರಿನಿಂದ ಇರಿದು ಕೊಲೆಗೈದಿದ್ದಾರೆ.

ಡಯಾನ ಕುಕ್ಕಿಕಟ್ಟೆಯ ಫೈಜಲ್ ಖಾನ್, ಕಂಬಳ್ಳಿಯ ಜನತಾ ಕಾಲೋನಿಯ ಮೊಹಮ್ಮದ್ ಶರೀಫ್ ಮತ್ತು ಸುರತ್ಕಲ್ ಚೊಕ್ಕಬೆಟ್ಟಿನ ಶುಕ್ರು ಯಾನೆ ಅದ್ದು ಎಂಬಾವರೇ ಹತ್ಯೆಗೈದ ಆರೋಪಿಗಳೆಂದು ತಿಳಿದುಬಂದಿದೆ. ಈ ಮೂವರು ಸೈಫುದ್ದೀನ್ ಮಾಲಕತ್ವದ ಎಕೆಎಂಎಸ್ ಬಸ್ ನಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಅಲ್ಲದೆ, ಈ ಹಿಂದೆ ಸೈಫುದ್ದೀನ್ ಮುಂದಾಳತ್ವದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿಯೂ ಈ ಮೂವರು ಭಾಗಿಯಾಗಿದ್ದರು ಎನ್ನಲಾಗಿದೆ.

ಈ ಪೈಕಿ ಅಬ್ದುಲ್ ಶುಕೂರು ಮತ್ತು ಶರೀಫ್‌ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂವರು ಆರೋಪಿಗಳು ಸೈಫುದ್ದೀನ್ ನ ಜೊತೆಗಿದ್ದು, ವ್ಯವಹಾರಗಳಲ್ಲಿ ಸಹಕಾರ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜೊತೆಗಿದ್ದವರಿಗೆ ಸುಪಾರಿ ನೀಡಿ ಕೊಲೆ ಮಾಡಿಸಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ‌. ಈ ನಿಟ್ಟಿನಲ್ಲಿ ಪೊಲೀಸರು ಮೂರು ತಂಡ ರಚಿಸಿದ್ದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ‌.

Share This Article
Leave a Comment